ADVERTISEMENT

ಬಯಲುಸೀಮೆಗೆ ನೀರು:ವಿರೋಧ ಬೇಡ- ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ತುಮಕೂರು: `ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನಿಂದ ಬಯಲುಸೀಮೆ ಬವಣೆ ತೀರುತ್ತದೆ ಎಂದರೆ ಅಂಥ ಯೋಜನೆಗೆ ನನ್ನ ವಿರೋಧ ಇಲ್ಲ. ನೇತ್ರಾವತಿ ನದಿಯನ್ನೇ ತಿರುಗಿಸುತ್ತೀರೆಂಬ ಆತಂಕದಿಂದ ಕರಾವಳಿಯಲ್ಲಿ ಪರಮಶಿವಯ್ಯ ವರದಿಗೆ ವಿರೋಧ ವ್ಯಕ್ತವಾಗುತ್ತಿದೆ~ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.

ಗುರುವಂದನೆ ಸ್ವೀಕರಿಸಲು ನಗರಕ್ಕೆ ಆಗಮಿಸಿದ್ದ ವಿಶ್ವೇಶ ತೀರ್ಥರನ್ನು ಶನಿವಾರ ಸಂಸದ ಜಿ.ಎಸ್. ಬಸವರಾಜ್ ನೇತೃತ್ವದಲ್ಲಿ ಭೇಟಿ ಮಾಡಿದ ನೀರಾವರಿ ಹೋರಾಟ ಸಮಿತಿ ಮುಖಂಡರು, `ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ನೀರನ್ನು ಮಳೆಗಾಲದಲ್ಲಿ ಮಾತ್ರ ಪೂರ್ವಕ್ಕೆ ಹರಿಸಲಾಗುವುದು. ನೇತ್ರಾವತಿ ನದಿಯನ್ನೇ ಪೂರ್ವಕ್ಕೆ ತಿರುಗಿಸುವ ಯಾವುದೇ ಪ್ರಸ್ತಾವ ಯೋಜನೆಯಲ್ಲಿ ಇಲ್ಲ~ ಎಂದು ಸ್ಪಷ್ಪಪಡಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಕರಾವಳಿ- ಬಯಲುಸೀಮೆ ಭಾಗದ ನೀರಾವರಿ ತಂತ್ರಜ್ಞರು, ಅಧಿಕಾರಿಗಳು, ಪರಿಸರ ಹೋರಾಟಗಾರರು ಮತ್ತು ನಾಗರಿಕ ಸಮಿತಿ ಸದಸ್ಯರ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಶೀಘ್ರ ಆಯೋಜಿಸಿದರೆ ಪರಸ್ಪರ ಚರ್ಚೆಗೆ ಅನುಕೂಲವಾಗುತ್ತದೆ ಎಂದು ಬಸವರಾಜ್ ಕೋರಿದರು. ಸಮಾಲೋಚನಾ ಸಭೆ ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಸ್ವಾಮೀಜಿ ಭರವಸೆ ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.