ADVERTISEMENT

ಬರ ಪರಿಸ್ಥಿತಿ: ಮಲ್ಲನಕುಪ್ಪೆ ಗ್ರಾಮಸ್ಥರಿಂದ ಸಚಿವರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಮದ್ದೂರು: ತಾಲ್ಲೂಕಿನ ಮಲ್ಲನಕುಪ್ಟೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಬುಧವಾರ ಸಂಜೆ ಆಗಮಿಸಿದ ಸಚಿವರ ದಂಡು ಗ್ರಾಮಸ್ಥರ ಆಕ್ರೋಶವನ್ನು ಎದುರಿಸಬೇಕಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಆರ್. ಆಶೋಕ್ ಅವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.`ಊರಿನಲ್ಲಿ ಜಾನುವಾರುಗಳಿಗೆ ಮೇವು, ನೀರು ಇಲ್ಲ. ನೀರಿನ ತೀವ್ರ ಕೊರತೆ ಇದೆ.ಆದರೆ ನೀವು ಕೆಲವೇ ನಿಮಿಷಗಳ ಭೇಟಿಗೆ ಬಂದು ಕಾಟಾಚಾರದ ಪರಿಶೀಲನೆ ಮಾಡುತ್ತಿರುವುದು ಏಕೆ?~ ಎಂದು ಆಕ್ರೋಶವ್ಯಕ್ತಪಡಿಸಿದರು.

ಜನರ ಮನವೋಲಿಸಲು ಯತ್ನಿಸಿದ ಸಚಿವ ಅಶೋಕ್, ಅವರಿಂದ ಮನವಿ ಸ್ವೀಕರಿಸಿದರು. ನಂತರ ತರಾತುರಿಯಲ್ಲಿ ಕಾರುಹತ್ತಿ ಬೆಂಗಳೂರಿನತ್ತ ತೆರಳಿದರು.

ಅಹವಾಲು ಸ್ವೀಕಾರ: ಬುಧವಾರ ಸಂಜೆ ತಾಲ್ಲೂಕಿನ ಕೊಪ್ಪ ಹಾಗೂ ಆತಗೂರು ಹೋಬಳಿಯ ಮಲ್ಲನಕುಪ್ಪೆ ಗ್ರಾಮಗಳಿಗೆ ಸಚಿವ ಆರ್.ಅಶೋಕ್ ಅವರು ಕಾರ್ಮಿಕ ಸಚಿವ ಬಚ್ಚೇಗೌಡ ಹಾಗೂ ಕಾನೂನು ಸಚಿವ ಸುರೇಶ್‌ಕುಮಾರ್ ಜೊತೆ ಭೇಟಿ ನೀಡಿದರು.

 ಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೊಪ್ಪ ಕಡೇ ಭಾಗದ ನಾಲೆಗೆ ಕೂಡಲೇ ನೀರು ಹರಿಸುವ ಮೂಲಕ ಒಣಗುತ್ತಿರುವ ನೂರಾರು ಎಕರೆ ಕಬ್ಬು, ಭತ್ತ, ಹಿಪ್ಪುನೇರಳೆ ಬೆಳೆಗಳನ್ನು ರಕ್ಷಿಸಬೇಕು ಎಂದು ರೈತರು ಆಗ್ರಹಿಸಿದರು.

ಕೂಡಲೇ ಕಡೇ ಭಾಗಕ್ಕೆ ನೀರು ಒದಗಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.  ನಂತರ ಅಲ್ಲಿಂದ ಆತಗೂರು ಹೋಬಳಿಯ ಹೂತಗೆರೆ ಗ್ರಾಮದ ಒಣಗಿರುವ ಕೆರೆಯನ್ನು ವೀಕ್ಷಿಸಿದರು.

ಶಾಸಕರಾದ ಕಲ್ಪನ ಸಿದ್ದರಾಜು, ಕೆ.ಸುರೇಶಗೌಡ, ಬಿ.ರಾಮಕೃಷ್ಣ, ಎಂ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲಿಂಗೇಗೌಡ, ಕೆ.ರವಿ, ಮಾಜಿ ಸದಸ್ಯ ಸ್ವರೂಪ್‌ಚಂದ್, ತಾಲ್ಲೂಕು ಪಂಚಾಯಿತಿ ಸದಸ್ಯ ಬಿಳಗೌಡ, ಪುರಸಭಾಧ್ಯಕ್ಷ ಚಂದ್ರು, ಜಿಲ್ಲಾ ಪಂಚಾಯಿತಿ ಸಿಇಓ ಜಯರಾಂ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.