ADVERTISEMENT

ಬಳ್ಳಾರಿ: ವಿದ್ಯಾರ್ಥಿನಿಯರ ಮೇಲೆ ದಾಳಿ- ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬಳ್ಳಾರಿ: ಸ್ಥಳೀಯ ರಾವ್‌ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ರಸ್ತೆ, ವೀರಶೈವ ಕಾಲೇಜು ರಸ್ತೆ, ವಿಮ್ಸ ಆಟದ ಮೈದಾನದ ಪಕ್ಕದ ರಸ್ತೆಗಳಲ್ಲಿ ಓಡಾಡುವ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡುತ್ತಿದ್ದ ಯುವಕನನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ.

ದೋಬಿ ಸ್ಟ್ರೀಟ್ ನಿವಾಸಿ ರಾಜೇಶ್ (24) ಬಂಧಿತ ಆರೋಪಿ. ಈತ ಒಂಟಿಯಾಗಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವ ವಿದ್ಯಾರ್ಥಿನಿಯರ ಮೇಲೆದಿಢೀರ್ ದಾಳಿ ಮಾಡಿ, ಬ್ಲೇಡ್ ಹಾಗೂ ಚಾಕುವಿನಿಂದ ತಿವಿದು ಗಾಯಗೊಳಿಸಿ ಪರಾರಿಯಾಗುತ್ತಿದ್ದ.

ಫೆಬ್ರುವರಿ ಮತ್ತು ಮಾರ್ಚ್‌ಯಲ್ಲಿ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಈತ ದಾಳಿ ಮಾಡಿದ್ದ. ಇದರಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿನಿಯರು ಆ ರಸ್ತೆಗಳಲ್ಲಿ ಓಡಾಡುವುದನ್ನೇ ನಿಲ್ಲಿಸಿದ್ದರು.ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯನ್ನೂ ತಡೆದು ಈತ ಇರಿದಿದ್ದ. ಈತನ ದಾಳಿಗೆ ಸಿಲುಕಿ ಮೂರ್ಛೆ ಹೋಗಿದ್ದ ಯುವತಿಯೊಬ್ಬಳು ಚಿಕಿತ್ಸೆ ಪಡೆದ ನಂತರ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಿದ್ದಳು.

ಈ ಹಿನ್ನೆಲೆಯಲ್ಲಿ  ಕಾಲೇಜು ಆಡಳಿತ ಮಂಡಳಿ ದೂರು ನೀಡಿತ್ತು. ಮಂಗಳವಾರ ರಾತ್ರಿ 8ರ ವೇಳೆ ಈತ ಯುವತಿಯೊಬ್ಬಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಾಗ, ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಇನ್‌ಸ್ಪೆಕ್ಟರ್ ವೈ.ಡಿ. ಅಗಸೀಮನಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದರು.

ಬಂಧಿತನು ಸರಗಳ್ಳ ಇರಬಹುದು ಎಂದೇ ಭಾವಿಸಿದ್ದ ಪೊಲೀಸರಿಗೆ, ಆತ ಒಂಟಿಯಾಗಿ ಬರುತ್ತಿದ್ದ ಯುವತಿಯರ ಮೇಲೆ ದಾಳಿ ಮಾಡುತ್ತಿದ್ದ ಆಗಂತುಕ ಎಂದು ಗೊತ್ತಾಯಿತು.ಕೆಲವು ಯುವತಿಯರ ಮೇಲೆ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿರುವ ರಾಜೇಶನನ್ನು ನ್ಯಾಯಾಂಗ ವಶಕ್ಕೆ ಸಲ್ಲಿಸಲಾಗಿದೆ.

ಯುವತಿಯರ ಮೇಲೆ ದಾಳಿ ನಡೆಸಿದರೂ ಅವರಿಂದ ಬೆಲೆ ಬಾಳುವ ವಸ್ತುಗಳನ್ನು ಅಪಹರಿಸಿಲ್ಲ. ಅಲ್ಲದೆ, ಯಾರ ಮೇಲೂ ಅತ್ಯಾಚಾರಕ್ಕೂ ಯತ್ನಿಸಿಲ್ಲ. ಮಾನಸಿಕ ಅಸ್ವಸ್ಥತೆಯಿಂದಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.