ADVERTISEMENT

ಬಹಿಷ್ಕಾರ ಹಾಕಿಲ್ಲ; ದೂರು ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಅರಕಲಗೂಡು: ಸವರ್ಣೀಯರಿಗೆ ಕಿರುಕುಳ ನೀಡಬೇಕೆಂಬ ಉದ್ದೇಶದಿಂದ ಕೆಲವರು ಸಿದ್ದಾಪುರ ಗ್ರಾಮದಲ್ಲಿ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ. ದುರುದ್ದೇಶದಿಂದ ದಾಖಲಿಸಿದ ದೂರನ್ನು ಕೈಬಿಡಬೇಕು ಎಂದು ಸಿದ್ದಾಪುರ ಗ್ರಾಮಸ್ಥರು ಶನಿವಾರ ತಹಶೀಲ್ದಾರ್ ಎಂ.ಕೆ. ಸವಿತಾ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಿಂದ ಬಂದಿದ್ದ ಐದು ನೂರಕ್ಕೂ ಹೆಚ್ಚು ಜನರು `ಬಹಿಷ್ಕಾರದ ಹಿನ್ನೆಲೆಯಲ್ಲಿ ಗ್ರಾಮದ 17 ಮಂದಿ ವಿರುದ್ಧ ಕೊಣನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದನ್ನು ಕೈಬಿಡಬೇಕು~ ಎಂದು ಆಗ್ರಹಿಸಿ ಮಿನಿ ವಿಧಾನಸೌಧದ ಮುಂದೆ ಧರಣಿಗೆ ಮುಂದಾದರು. ಆದರೆ ತಹಶೀಲ್ದಾರ್ ಎಂ.ಕೆ. ಸವಿತಾ ಇದಕ್ಕೆ ಅವಕಾಶ ನೀಡಲಿಲ್ಲ. ಭಾನುವಾರ ನಡೆಯಲಿರುವ ಕೊಣನೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು, ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಬಳಿಕ ಗ್ರಾಮಸ್ಥರು ಸ್ವಲ್ಪ ಹೊತ್ತು ಕೊತ್ತಲು ಗಣಪತಿ ಉದ್ಯಾನದಲ್ಲಿ ಧರಣಿ ಕುಳಿತರು. ಧರಣಿ ನಿರತರನ್ನು ಭೇಟಿ ಮಾಡಿದ ಸವಿತಾ, ಅವರಿಂದ ಮನವಿ ಸ್ವೀಕರಿಸಿದರು. `ಗ್ರಾಮದ 17 ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು ಬಂಧನದ ಭೀತಿಯಿಂದ ಇವರು ಗ್ರಾಮ ತೊರೆದಿದ್ದಾರೆ. ಇದರಿಂದ ಇವರ ಕುಟುಂಬದವರಿಗೆ  ತೊಂದರೆಯಾಗಿದೆ. ಘಟನೆಯ ಸತ್ಯಾಸತ್ಯತೆ ತಿಳಿದು ನಮಗೆ ನ್ಯಾಯ ದೊರಕಿಸಿ ಕೊಡಿ~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸೆ.25ರಂದು ಗ್ರಾಮದಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿದೆ. ಸಕಲೇಶಪುರ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ಶಾಂತಿಯಿಂದ ಗ್ರಾಮಕ್ಕೆ ವಾಪಸ್ ತೆರಳುವಂತೆ ತಹಶೀಲ್ದಾರ್ ಮನವಿ ಮಾಡಿದ ಬಳಿಕ ಗ್ರಾಮಸ್ಥರು ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.