ADVERTISEMENT

ಬಹು ಉಪಯೋಗಿ ಹೈಬ್ರಿಡ್ ವಾಹನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST
ಬಹು ಉಪಯೋಗಿ ಹೈಬ್ರಿಡ್ ವಾಹನ
ಬಹು ಉಪಯೋಗಿ ಹೈಬ್ರಿಡ್ ವಾಹನ   

ದೊಡ್ಡಬಳ್ಳಾಪುರ: ಪಟ್ಟಣದ ಆರ್.ಎಲ್.ಜಾಲಪ್ಪ ತಾಂತ್ರಿಕ ವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾಥಿಗಳು ಪ್ರೊ.ಎಚ್.ಜಿ.ಶಣೈ ಅವರ ಮಾರ್ಗದರ್ಶನದಲ್ಲಿ 100 ಸಿಸಿ ಸಾಮರ್ಥ್ಯದ ನಾಲ್ಕು ಚಕ್ರದ ಹೈಬ್ರಿಡ್ ವಾಹನ ಸಿದ್ದಪಡಿಸಿ ಎಲ್ಲರನ್ನು ಚಕಿತಗೊಳಿಸಿದ್ದಾರೆ. 

ಪರಿಸರ ಸ್ನೇಹಿ ಲಘು ವಾಹನವಾಗಿರುವ ಇದು ಸೋಲಾರ್, ವಿದ್ಯುತ್ ಬ್ಯಾಟರಿ ಹಾಗೂ ಪೆಟ್ರೋಲ್ ಮೂರರಿಂದಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿಯೇ ಈ ವಾಹನಕ್ಕೆ ವಿದ್ಯಾರ್ಥಿಗಳು ಹೈಬ್ರಿಡ್ ವಾಹನ ಎಂದು ನಾಮಕರಣ ಮಾಡಿದ್ದಾರೆ. ಈ ಮೂರರಲ್ಲಿ ಯಾವುದು ಲಭ್ಯ ಇರುತ್ತದೆಯೋ ಅದನ್ನು ಬಳಸಿಕೊಂಡು ಈ ವಾಹನ ಚಾಲನೆ ಮಾಡಬಹುದು. ತರಕಾರಿ, ಗೊಬ್ಬರ ಸಾಗಣಿಕೆಗೆ ಹೇಳಿಮಾಡಿಸಿದಂತಿರುವ ಈ ವಾಹನ ಅಂಗವಿಕಲರಿಗೂ ಉಪಯೋಗಿ ಎನ್ನುತ್ತಾರೆ ಲಿಬೂಜಾರ್ಜ್ ಬಾಬು, ಅಜಯ್ ವರ್ಧಮಾನ್, ವೆಂಕಟೇಶ್ ಹಾಗೂ ಜಿ.ಸುನಿತಾ.

`100 ಸಿಸಿ ಸಾಮರ್ಥ್ಯವನ್ನು ಹೊಂದಿರುವ ನಾಲ್ಕು ಚಕ್ರದ ಈ ವಾಹನ ಸೋಲಾರ್,ವಿದ್ಯುತ್ ಬ್ಯಾಟರಿ ಹಾಗೂ ಪೆಟ್ರೋಲ್ ಮೂರರಿಂದಲೂ ಚಲಿಸುವಂತೆ ಮಾಡಿರುವುದು ದೇಶದಲ್ಲೇ ಪ್ರಥಮ. ಈ ಯಂತ್ರದ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಮಾಣ ಪತ್ರ ನೀಡಿದೆ~ ಎನ್ನುತ್ತಾರೆ ಪ್ರೊ.ಎಚ್.ಜಿ.ಶಣೈ.

ADVERTISEMENT

ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ವಾಹನ ಒಂದು ಲೀಟರ್ ಪೆಟ್ರೋಲ್‌ಗೆ 40 ಕಿ.ಮೀ. ಮೈಲೇಜ್ ನೀಡುತ್ತದೆ. ಒಂದು ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ಇದು 45 ರಿಂದ 60 ಕಿ.ಮೀ.ವರೆಗೆ ಚಲಿಸಬಲ್ಲದು. ಈ ವಾಹನಕ್ಕೆ ಗೇರ್ ಇಲ್ಲ. ಸ್ಕೂಟರ್ ಮಾದರಿಯಲ್ಲಿ ಎಕ್ಸಿಲೇಟರ್ ಹಾಗೂ ಬ್ರೇಕ್ ಎಲ್ಲವನ್ನು ಕೈಯಲ್ಲೇ ಮಾಡಲು ಸಾಧ್ಯವಿರುವುದರಿಂದ ಅಂಗವಿಕಲರು ಸುಲಭವಾಗಿ ಚಾಲನೆ ಮಾಡಬಹುದು. ಇದು ಸರಕು ಸಾಗಣಿಕೆ ಹಾಗೂ ಮೂರು ಜನ ಕುಳಿತು ಪ್ರಯಾಣ ಮಾಡಲು ಅನುಕೂಲ ಇದೆ. ಇದನ್ನು ಸಿದ್ದಪಡಿಸಲು ಸುಮಾರು 70 ರಿದ 80 ಸಾವಿರ ರೂಗಳಷ್ಟು ಖರ್ಚು ಮಾಡಲಾಗಿದೆ. ರಾಜ್ಯದ ತಾಂತ್ರಿಕ ಶಿಕ್ಷಣ ಮಂಡಲಿ ವತಿಯಿಂದ ಅನುಮತಿ ದೊರೆತ ನಂತರ ಇದನ್ನು ಮತ್ತಷ್ಟು ಅಭಿವೃದ್ದಿಗೊಳಿಸಲಾಗುವುದು ಎನ್ನುತ್ತಾರೆ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.