ADVERTISEMENT

ಬಾಬಾ ಬಂಧನ; ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಮಡಿಕೇರಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಬಂಧನವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ಬಾಬಾ ರಾಮ್‌ದೇವ್ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸುತ್ತದೆ. ರಾಮ್‌ದೇವ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ದೇಶದೆಲ್ಲೆಡೆ ಆಂದೋಲನ ಆರಂಭವಾಗಿದೆ; ಇದು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯಾಗಿದೆ ಎಂದರು.

ಬಾಬಾ ಬಂಧನ ಕ್ರಮದಿಂದ ರಾಷ್ಟ್ರದಲ್ಲಿ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ತಕ್ಷಣ ಈ ಸರಕಾರವನ್ನು ರಾಷ್ಟ್ರಪತಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಕಳುಹಿಸಲಾಗಿದ್ದು, ಸ್ವಿಸ್ ಬ್ಯಾಂಕ್‌ನಲ್ಲಿರುವ 14,500 ಕೋಟಿ ಡಾಲರ್ ಕಪ್ಪು ಹಣವನ್ನು ವಾಪಸು ತಂದು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ. 

ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಜಿಲ್ ಪಿ. ಕೃಷ್ಣನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಪಂಡ ಕಾಳಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಮನುಮುತ್ತಪ್ಪ, ಎಪಿಎಂಸಿ ಅಧ್ಯಕ್ಷ ಪುದಿಯೊಕ್ಕಡ ಬೆಲ್ಲು ಸೋಮಯ್ಯ, ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಮುಡಾ ಮಾಜಿ ಅಧ್ಯಕ್ಷ ಎ.ಕೆ.ಪಾಲಾಕ್ಷ, ನಗರಸಭೆ ಉಪಾಧ್ಯಕ್ಷೆ ವಸಂತ ಕೇಶವ, ನಗರ ಬಿಜೆಪಿ ಅಧ್ಯಕ್ಷ ಅರುಣ್‌ಕುಮಾರ್, ನಗರಸಭೆ ಮಾಜಿ ಸದಸ್ಯ ರಮೇಶ್ ಹೊಳ್ಳ, ಲೋಕೇಶ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.