ಕೋಲಾರ: ಬಿತ್ತನೆ ಬೀಜಗಳ ಬೆಲೆ ಏರಿಕೆ ತಡೆಯಬೇಕು ಎಂದು ಕೋರಿ ನಗರದಲ್ಲಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಮುಖರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಬಾರಿ ಮುಂಗಾರು ಬಿತ್ತನೆ ಆರಂಭವಾಗುವ ಮುಂಚೆಯೇ ಬಿತ್ತನೆ ಬೀಜಗಳ ಬೆಲೆಯನ್ನು ಖಾಸಗಿ ಸಂಸ್ಥೆಗಳು ಹೆಚ್ಚಿಸಲಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.ಕಳೆದ ವರ್ಷ ಖಾಸಗಿ ಸಂಸ್ಥೆಗಳು ಶೇ.20ರಿಂದ 30ರಷ್ಟು ಬೆಲೆ ಹೆಚ್ಚಿಸಿದ್ದವು.
ಸುಧಾರಿತ ಹೈಬ್ರೀಡ್ ತಳಿ ಹಾಗೂ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ಸುಲಭವಾಗಿ ದೊರಕುತ್ತದೆಂಬ ಕಾರಣಕ್ಕೆ ಖಾಸಗಿ ಸಂಸ್ಥೆಗಳಿಂದ ರೈತರು ಬೀಜ ಖರೀದಿಸುತ್ತಾರೆ. ಅದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಕಂಪೆನಿಗಳ ಮಾಲೀಕರು ಕೃತಕ ಅಭಾವ ಸೃಷ್ಟಿಸಿ, ಬೀಜಗಳ ಬೆಲೆಯನ್ನು ಮನಬಂದಂತೆ ಏರಿಸುತ್ತಾರೆ ಎಂದರು.
ಬೀಜ ಕಂಪೆನಿಗಳಿಗೆ ಕಡಿವಾಣ ಹಾಕಲು ಸರ್ಕಾರದ ಮಟ್ಟದಲ್ಲಿ ಸಮಿತಿ ಇದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕ್ರಮ ಕೈಗೊಂಡು ರೈತರಿಗೆ ಅನುಕೂಲವಾಗುವಂತೆ ಬೀಜಗಳ ಬೆಲೆಯನ್ನು ನಿಗದಿ ಮಾಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.