ADVERTISEMENT

ಬಿತ್ತನೆ ಬೀಜ ವಿತರಣೆಗೆ ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಮದ್ದೂರು: ಸಮರ್ಪಕ ಬಿತ್ತನೆ ಬೀಜ ವಿತರಣೆಗೆ ಆಗ್ರಹಿಸಿ ವಿವಿಧ ಗ್ರಾಮಗಳ ರೈತರು ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು. ಬತ್ತದ ಬಿತ್ತನೆ ವಿತರಣೆ ಮಾಡುತ್ತಿರುವ ವಿಚಾರ ತಿಳಿದು ಕಚೇರಿಗೆ ಆಗಮಿಸಿದ ರೈತರು, ಜಯ ತಳಿ ಬಿತ್ತನೆ ಬೀಜ ನೀಡುವಂತೆ ಆಗ್ರಹಿದರು.

ಜಯ ತಳಿ ದಸ್ತಾನು ಇಲ್ಲ. 1001, ಡಿಪಿಟಿ, ಐ.ಆರ್.64 ತಳಿ ಬತ್ತ ಪಡೆಯುವಂತೆ ಕೃಷಿ ಅಧಿಕಾರಿಗಳು ತಿಳಿಸಿದಾಗ, ಆಕ್ರೋಶಗೊಂಡ ರೈತರು, ಜಯ ತಳಿ ಬಿತ್ತನೆ ಬೇಕು ಎಂದು ಆಗ್ರಹಿಸಿದರು. ಅಲ್ಲದೇ ಕೃಷಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕೃಷಿ ಸಹಾಯಕ ನಿರ್ದೇಶಕಿ ಡಾ.ಕೆ.ಸಿ.ಸುಷ್ಮ, ರೈತರನ್ನು ಸಮಾಧಾನಪಡಿಸಿದರು. 300 ಮೂಟೆ ಜಯ ಬಿತ್ತನೆ ಬತ್ತದ ದಾಸ್ತಾನು ಇದ್ದು, ಅದರಲ್ಲಿ ಕೆಲವು ಮೂಟೆಗಳಲ್ಲಿ ಬಿತ್ತನೆದೋಷಪೂರಿತವಾಗಿರುವುದರಿಂದ ಸದ್ಯ ವಿತರಿಸಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆಗೆ ಇನ್ನಷ್ಟು ದಾಸ್ತಾನು ಬರಲಿದ್ದು, ನಾಳೆಯಿಂದ ಸಮರ್ಪಕ ವಿತರಣೆಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಮುಖಂಡರಾದ ಸುರೇಶ್, ಪುರುಷೋತ್ತಮ್, ರಾಮು, ಕೃಷ್ಣ, ಸತೀಶ್, ರಮೇಶ್, ಗಿರೀಶ್, ವೆಂಕಟೇಶ್, ಮರೀಗೌಡ, ಸಿದ್ದೇಗೌಡ, ಕೆಂಚೇಗೌಡ ಸೇರಿದಂತೆ ಸಾದೊಳಲು, ಬೋರಾಪುರ, ವೈದ್ಯನಾಥಪುರ, ಗೊರವನಹಳ್ಳಿ, ಗೆಜ್ಜಲಗೆರೆ, ನಗರಕೆರೆ, ಕೆ.ಕೋಡಿಹಳ್ಳಿಯ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.