ADVERTISEMENT

ಬಿತ್ತಿಯೂ ಬರಗಾಲ: ರೈತರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 9:41 IST
Last Updated 12 ಡಿಸೆಂಬರ್ 2012, 9:41 IST

ಹುನಗುಂದ: ಕೈಕೊಟ್ಟ ಮುಂಗಾರಿಯ ಕರಿನೆರಳಲ್ಲಿ ಸಾವರಿಸಿಕೊಂಡು ಹಿಂಗಾರಿ ಬಿತ್ತನೆ ಮಾಡಿದ ತಾಲ್ಲೂಕಿನ ರೈತರು ಬರಗಾಲವನ್ನು ಮತ್ತೆ ಅನುಭವಿಸಬೇಕಾಗಿದೆ. ಶೇ 75ರಷ್ಟು ಕಡಲೆ, ಶೇ 15ರಷ್ಟು ಬಿಳಿಜೋಳ ಮತ್ತು ಶೇ 10ರಷ್ಟು ಸೂರ್ಯಕಾಂತಿ ಬಿತ್ತನೆ ಮಾಡಿ ನಾಟಿದ ಪೈರು ಮೇಲೆಳದೇ ಒಣಗುತ್ತಿರುವುದನ್ನು ಆತಂಕಕ್ಕೆ ಒಳಗಾಗಿದ್ದಾರೆ. ದನಕರುಗಳ ಮೇವು ಹೋಗಲಿ ತಮಗೂ ಈ ಬಾರಿ ತಿನ್ನುವ ಅನ್ನಕ್ಕೆ ಸಂಚಗಾರ ಬರುವುದನ್ನು ನೆನಸಿಕೊಂಡು ಹೆದರುತ್ತಿದ್ದಾರೆ.

ಬಿತ್ತನೆಯ ನಂತರ ಆಗೊಂದಿಷ್ಟು ಈಗೊಂದಿಷ್ಟು ಹಿಂಗಾರಿ ಮಳೆ ಮುಖ ಮಾಡಿತು ವಿನ: ಬೆಳೆ ಬರುವಷ್ಟು ಅನುಕೂಲವಾಗಲಿಲ್ಲ. ಆದರೂ ಚಂಡಮಾರುತ ಮತ್ತು ಅಕಾಲಿಕ ಮಳೆಯ ಭರವಸೆಯನ್ನು ಇಟ್ಟುಕೊಂಡು ಹೊಲ ಬಿತ್ತಿದರು. ಆದರೆ ಆದದ್ದೇನು ? ಬೀಜ ಹಾಗೂ ಗೊಬ್ಬರದ ಹಾನಿಯ ಭಾರ ರೈತನ ಹೆಗಲೇರಿದೆ. ಕಳೆದ ಒಂದು ತಿಂಗಳಿಂದ ಧನ್ನೂರ ಮತ್ತು ಮರೋಳ ಭಾಗದ ರೈತರು ಹರಸಾಹಸ ಮಾಡಿ ಕಾಲುವೆಯ ನೀರನ್ನು ಹಾಯಿಸಿದ್ದಾರೆ. ಅದು ಪ್ರಯೋಜನವಾಗಿಲ್ಲ. ಬಿತ್ತನೆಗಾಗಿ ತಲಾ ಎಕರೆಗೆ ರೂ.5 ಸಾವಿರ ಖರ್ಚು ಮಾಡಿದ್ದು ಇದು ಸಾಲವೆ. ಇನ್ನು ಕಾಲುವೆಯ ಮುಖಾಂತರ ನೀರು ಕೊಡಲು ಎಕರೆಗೆ ಹತ್ತಾರು ಸಾವಿರ ಖರ್ಚು ಮತ್ತು ಅದರ ಗೋಳನ್ನು ಕೇಳುವವರೆ ಇಲ್ಲ ಎನ್ನಲಾಗಿದೆ.

ಪ್ರಮುಖ ರೈತರಾದ ನಾಗಪ್ಪ ತ್ಯಾಪಿ, ಶಿವಪ್ಪ ಸುಂಕಾಪುರ, ಗಿರಿಮಲ್ಲಪ್ಪ ಹಳಪೇಟಿ, ಪರಮೇಶ ಬಾದವಾಡಗಿ ಹಾಗೂ ಹನಮಂತಪ್ಪ ಚೂರಿ ತಮ್ಮ ಅನಿಸಿಕೆ ಹೇಳುತ್ತ, `ಈ ಸಲ ಬೆಳಿ ಒಂದಿಷ್ಟೂ ಬರುದಿಲ್ರಿ, ಸುಮಾರು 25 ವರ್ಷಗಳಿಂದ ಒಕ್ಕಲುತನ ಮಾಡುವ ನಮಗ ಈ ಸಲ ಇಲ್ಲದ ಚಿಂತೆಯಾಗೆದ. ಮಳೆಯಪ್ಪ ಬರಲಿಲ್ಲ ಅಂದ್ರ ಬಿತ್ತತ್ತಿದ್ದಿಲ್ಲ, ಒಂದಿಟು ಏನ... ಮಳಿಯಾತಂತ ಬಿತ್ತಿದ್ರ, ನಮ್ಮ ಗತಿ ಹಿಂಗಾತ ನೋಡ್ರಿ'  ಕೂರ‌್ಗಿ ನಾಕ ಚೀಲ ಜ್ವಾಳ ಮತ್ತ ಎರಡ್ಮೂರು ಚೀಲ ಕಡ್ಲಿ ಆಗ್ಬೇಕಾದ್ರ ದೊಡ್ಡದಾತ್ರಿ` ಎಂದರು.

  ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ ಹಾಗೂ ಯುವ ಸಾವಯವ ರೈತ ಕೃಷ್ಣ ಜಾಲಿಹಾಳ ತಮ್ಮ ಅಭಿಪ್ರಾಯ ತಿಳಿಸಿ, ಮತ್ತೆ ಬರಗಾಲ ನಿಶ್ಚಿತ. ಅಲ್ಪಸ್ವಲ್ಪ ಕಾಯಿಬಿಟ್ಟ ಕಡಲೆ ಕಾಪು ಕತ್ತರಿಸುತ್ತಿದೆ. ಜೋಳ ಹಸಿ ಆರಿ ಎರಬೀಡಿ ಬಿಟ್ಟು ಒಣಗುತ್ತಿವೆ.
ಕಡಲೆಯ ಕೀಡಿ ಭಾದೆ ತಡೆಯಲು ಕೀಟನಾಷಕ ಸಿಂಪಡಿಸಿದರು. ರೈತರ ಪರಿಸ್ಥಿತಿ ಗಂಭೀರ ಎನ್ನುತ್ತ 2010ರ ಬೆಳೆವಿಮೆಯೆ ಸರಿಯಾಗಿ ಬಂದಿಲ್ಲ.

ಸರ್ಕಾರ ಸಮೀಕ್ಷೆ ಹಂತದಲ್ಲಿ ಸಾಕಷ್ಟು ಗೊಂದಲ ಮಾಡಿ ರೈತರನ್ನು ಹೈರಾಣಗೊಳಿಸುತ್ತಿದೆ. ಈ ಹಿಂದೆ ಸುವರ್ಣಭೂಮಿ ಯೋಜನೆಯಲ್ಲಿ ಕೊಟ್ಟ ಸಹಾಯಧನ ಯಾವುದಕ್ಕೆ ಸಾಲಬೇಕು' ಎಂದು ಗೊಣಗಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗೋಪ್ಯಾನಾಯಕ, ಏಕದಳ ಧಾನ್ಯ 34500 ಹೆಕ್ಟೇರ್, ಬೇಳೆಕಾಳು 48100 ಹೆಕ್ಟೇರ್. ಎಣ್ಣೆಕಾಳು 23400 ಹೆಕ್ಟೇರ್, ವಾಣಿಜ್ಯ ಬೆಳೆ 1550 ಹೆಕ್ಟೇರ್ ತಾಲ್ಲೂಕಿನಲ್ಲಿ ಬಿತ್ತನೆಯಾಗಿದೆ. ಒಂದು ವಾರದಲ್ಲಿ ಮಳೆ ಬಂದರೆ ಜೀವ ಹಿಡಿಯಬಹುದು.

ಸದ್ಯಕ್ಕೆ ಒಣಹವೆ, ಬಿಸಿಲಿನಿಂದ ಕಡಲೆ ಕಪ್ಪಗಾಗಿವೆ. ಜೋಳ ಬಾಡಿ ನೆಲಕ್ಕೆ ಬೀಳುತ್ತಿವೆ. ಬೆಳೆ ಬರುವುದು ಕಷ್ಟ. ಅಲ್ಲಲ್ಲಿ ತಗ್ಗು ಪ್ರದೇಶ ಮತ್ತು ನೀರು ನಿಲ್ಲಿಸಿದೆಡೆ ಒಂದಿಷ್ಟು ಕೈಹಿಡಿಯಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.