ADVERTISEMENT

ಬಿಲ್ಲವರ ಸಂಘ ಘರ್ಷಣೆ; ಮಹಾಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್‌ಗೆ ಬಿಲ್ಲವ ಸಮುದಾಯದವರನ್ನು ಸೇರಿಸಿಕೊಳ್ಳದೆ ತಾರತಮ್ಯ ನಡೆಸಲಾಗುತ್ತಿದೆ. ಅಧಿಕಾರದಲ್ಲಿ ಮುಂದುವರಿಯುವ ಉದ್ದೇಶದಿಂದ ಸಮುದಾಯವರನ್ನೇ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಬಿಲ್ಲವ ಸಮಾಜದ ಹಲವು ಪ್ರಮುಖರು ಪ್ರತಿಭಟನೆ ನಡೆಸಿದ್ದರಿಂದ ಕುದ್ರೋಳಿ ನಾರಾಯಣಗುರು ಕಾಲೇಜು ಆವರಣದಲ್ಲಿ ಮಂಗಳವಾರ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.

17 ಲಕ್ಷ ಜನಸಂಖ್ಯೆಯ ಬಿಲ್ಲವ ಸಮುದಾಯದ ಪ್ರಾತಿನಿಧಿಕ ಸಂಘದ ಸದಸ್ಯರ ಸಂಖ್ಯೆ ಕೇವಲ 2,500. ತಕ್ಷಣವೇ ಸದಸ್ಯರಾಗಲು 10 ಸಾವಿರಕ್ಕಿಂತ ಅಧಿಕ ಮಂದಿ ಸಿದ್ಧರಿದ್ದಾರೆ.
 
ಅವರನ್ನು ಸೇರಿಸಿಕೊಂಡ ಬಳಿಕವೇ ಮಹಾಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದು ಮಾತಿನ ಚಕಮಕಿಗೆ, ನಂತರ ಘರ್ಷಣೆಗೆ ಕಾರಣವಾಯಿತು.

ಪ್ರತಿವರ್ಷ ಶಿವರಾತ್ರಿ ಮರುದಿನ ಸಂಘದ ಮಹಾಸಭೆ ನಡೆಯುತ್ತದೆ. ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತವಾಯಿತು. ಗುಂಪಿನಲ್ಲಿದ್ದವರೊಬ್ಬರು ಕಾಲೇಜಿನ ಕಿಟಕಿ ಗಾಜು ಒಡೆದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸಲು ಪೊಲೀಸರು ಗಾಜು ಒಡೆದವನನ್ನು ವಶಕ್ಕೆ ಪಡೆದು ಲಾಠಿ ಬೀಸಿ ಜನರನ್ನು ಚದುರಿಸಿದರು.

ತಕ್ಷಣ ಸಭೆ ರದ್ದುಪಡಿಸಿದ ಸಂಘದ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಹೊಸದಾಗಿ ಸದಸ್ಯರನ್ನು ಸೇರಿಸಿಕೊಂಡು 3 ತಿಂಗಳೊಳಗೆ ವಿಶೇಷ ವಾರ್ಷಿಕ ಮಹಾಸಭೆ ಕರೆಯುವುದಾಗಿ ಪ್ರಕಟಿಸಿದರು.

ಇದರಿಂದ ಸಮಾಧಾನಗೊಂಡ ಸದಸ್ಯತ್ವ ಆಕಾಂಕ್ಷಿಗಳು ಕಾದು ನೋಡುವುದಾಗಿ ಹೇಳಿದರು. ಸ್ಥಳದಲ್ಲಿದ್ದ ನವೀನ್ ಚಂದ್ರ ಸುವರ್ಣ ಪತ್ರಕರ್ತರಿಗೆ ಹೇಳಿಕೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.