ADVERTISEMENT

ಬೀಗ ಹಾಕಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಲಕ್ಷ್ಮೇಶ್ವರ: ಸರ್ಕಾರ ರಫ್ತು ನಿಷೇಧ ಮಾಡಿದ್ದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದ್ದು ಇದನ್ನು ಖಂಡಿಸಿ ಮಂಗಳವಾರ ರೈತರು ಪಟ್ಟಣದ ಚಾವಡಿಗೆ ಕೀಲಿ ಜಡಿದು ಪ್ರತಿಭಟಿಸಿದರು.

ಮುಂಜಾನೆ ಸ್ಥಳೀಯ ಭಾನು ಮಾರ್ಕೆಟ್ ಆವರಣದಲ್ಲಿ ಜಮಾಯಿಸಿದ ರೈತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೆಲ ರೈತರು  ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತರಾದ ಸೋಮಣ್ಣ ಮುಳಗುಂದ ಹಾಗೂ ಎಪಿಎಂಸಿ ಸದಸ್ಯ ವಿ.ಜಿ. ಪಡಗೇರಿ `ಸರ್ಕಾರಕ್ಕೆ ರೈತರ ಬಗ್ಗೆ ಎಳಷ್ಟೂ ಕಾಳಜಿ ಇಲ್ಲ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದರೂ ರೈತನ ಫಸಲಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿರುವುದು ವಿಷಾದನೀಯ~ ಎಂದರು.

ಪುರಸಭೆ ಸದಸ್ಯ ಹಾಗೂ ರೈತ ಸೋಮನಗೌಡ ಪಾಟೀಲ ಮಾತನಾಡಿ `ಸರ್ಕಾರ ಕೂಡಲೇ ಈರುಳ್ಳಿಗೆ ಬೆಂಬಲ ಬೆಲೆ ಪ್ರಕಟಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು~ ಎಂದರು.

ಶಂಕ್ರಪ್ಪ ಮ್ಯಾಗೇರಿ, ದೇವಣ್ಣ ಬಳಿಗಾರ, ಟಿಎಪಿಸಿಎಂಎಸ್ ಅಧ್ಯಕ್ಷ ಗದಿಗೆಪ್ಪ ಯತ್ನಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚೆನ್ನಪ್ಪ ಜಗಲಿ, ಗಂಗಾಧರ ಸಂಕಲಿ, ಸುಭಾನ್ ಹೊಂಬಳ, ಶೌಕತ್ ಮುಳಗುಂದ, ನಾಝಲ್ ಮುಳಗುಂದ, ಸುಲೇಮಾನ್‌ಸಾಬ್ ಕಣಕೆ, ಯಲ್ಲಪ್ಪ ಹಾದಿಮನಿ   ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT