ADVERTISEMENT

ಬೇಡಿಕೆ ಈಡೇರಿಸಲು ಪ್ರೌಢಶಾಲಾ ಸಹ ಶಿಕ್ಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಮಡಿಕೇರಿ: ವೇತನ ತಾರತಮ್ಯ ಸರಿಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸದಸ್ಯರು ಕೊಡಗು ಜಿಲ್ಲಾ ಶಾಖೆ ಶನಿವಾರ  ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.

ನಗರದ ಗಾಂಧಿ ಮಂಟಪ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿದ ಪ್ರೌಢಶಾಲಾ ಸಹ ಶಿಕ್ಷಕರು ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ  ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ  ವಿಶೇಷ ಕಾಲಮಿತಿ ಬಡ್ತಿ, ವೈದ್ಯಕೀಯ ಭತ್ಯೆ, ಸ್ವಯಂಚಾಲಿತ ಬಡ್ತಿ ಮತ್ತಿತರ ಸವಲತ್ತುಗಳನ್ನು ನೀಡಬೇಕು.ವರ್ಗಾವಣೆ ಕೌನ್ಸೆಲಿಂಗ್ ಪದ್ಧತಿಯಲ್ಲಿನ ನ್ಯೂನತೆ ಸರಿಪಡಿಸಬೇಕು. ಮುಖ್ಯೋಪಾಧ್ಯಾಯರ ಹುದ್ದೆಗೆ ಶೇ. 75ರ ಅನುಪಾತದಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳಿಗೆ ಸಹ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ದರ, ಪರೀಕ್ಷಾ ದರ, ದಿನಭತ್ಯೆಗಳನ್ನು ಪದವಿ ಪೂರ್ವ ಕಾಲೇಜು  ಉಪನ್ಯಾಸಕರಿಗೆ ತತ್ಸಮಾನವಾಗಿ ನೀಡಬೇಕು. ಶಿಕ್ಷಣ ಸಂಯೋಜಕ ಹುದ್ದೆಗಳನ್ನು ವಿಷಯ ಪರಿವೀಕ್ಷಕರ ಹುದ್ದೆಗಳಾಗಿ ಪರಿವರ್ತಿಸಬೇಕು.

ಗಿರಿಭತ್ಯೆ ಸೌಲಭ್ಯವನ್ನು ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ವಿಸ್ತರಿಸುವುದು, 6ನೇ ವೇತನ ಆಯೋಗದ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಎಂದು  ಒತ್ತಾಯಿಸಿದರು.  ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಕಾರ್ಯದರ್ಶಿ ಶಫೀವುಲ್ಲಾ ಷರೀಫ್, ಉಪಾಧ್ಯಕ್ಷರಾದ ಟಿ.ಜಿ. ಪ್ರೇಮ್‌ಕುಮಾರ್, ಎಂ.ಯು. ಚಂಗಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.