ADVERTISEMENT

ಬ್ಯಾಂಕ್ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ತುಮಕೂರು: ನಗರದ ಎಸ್‌ಬಿಎಂ ಮುಖ್ಯ ಶಾಖೆ ಎದುರು ಬ್ಯಾಂಕ್ ನೌಕರರು ಬುಧವಾರ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರ ಮಟ್ಟದಲ್ಲಿ ಕರೆ ನೀಡಲಾಗಿದ್ದ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಬಂದ್ ಮಾಡಿ ನೌಕರರು ಪ್ರತಿಭಟನೆ ನಡೆಸಿದರು.

ಕಂಡೇವಾಲ್ ವರದಿ ಶಿಫಾರಸುಗಳನ್ನು ರದ್ದು ಮಾಡಬೇಕು. ಕಾರ್ಮಿಕ ವಿರೋಧಿ ನೀತಿಯನ್ನು ಕೈಬಿಡಬೇಕು. ಹೊರಗುತ್ತಿಗೆ ಆಧಾರದ ನೇಮಕಾತಿ ಕೈಬಿಡಬೇಕು. ಉದ್ಯೋಗವಕಾಶ ಹೆಚ್ಚಿಸಬೇಕು. ಗ್ರಾಮೀಣ ಬ್ಯಾಂಕ್ ಶಾಖೆಗಳನ್ನು ರದ್ದು ಮಾಡಬಾರದು. ಬ್ಯಾಂಕಿಂಗ್ ರೆಗ್ಯುಲೇಶನ್ ನಿಯಮವನ್ನು ಪುನರ್ ಪರಿಶೀಲನೆ ಮಾಡಬಾರದು ಎಂದು ಪ್ರತಿಭನಾನಿರತ ನೌಕರರು ಒತ್ತಾಯಿಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರುವ ಪ್ರಯತ್ನ ಸಿಬ್ಬಂದಿ ಮೇಲೆ ದುಷ್ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಎಲ್ಲ ಸುಧಾರಣಾ ಕ್ರಮಗಳನ್ನು ಕೂಡಲೇ ಕೈಬಿಡಬೇಕು. ಸಾವಿರಾರು ಜನರಿಗೆ ಅನುಕೂಲ ಕಲ್ಪಿಸುತ್ತಿರುವ ಗ್ರಾಮೀಣ ಶಾಖೆಗಳನ್ನು ಮುಚ್ಚುವ ಪ್ರಯತ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗಗಳಿಗೆ ಸಂಬಂಧಿಸಿದಂತೆ ಹೊಸದಾಗಿ ನೀಡುವ ಸೂಚನೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಬ್ಯಾಂಕ್ ನೌಕರರಾದ ವೆಂಕಟೇಶ್, ಜಾನಕಿರಾಂಬಾಬು, ಶಂಕರ್‌ಜೋಷಿ. ಲಕ್ಷ್ಮಯ್ಯ, ರಾಮಕೃಷ್ಣ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಿಲ್ಲೆಯ ತಾಲ್ಲೂಕು ಕೇಂದ್ರಗಳು, ಇತರೆಡೆ ಬ್ಯಾಂಕುಗಳು ಮುಚ್ಚಿದ್ದವು. ವಹಿವಾಟು ನಡೆಯದೆ ಸಾರ್ವಜನಿಕರು ಪರದಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.