ರಾಯಚೂರು: ಛತ್ರಪತಿ ಶಿವಾಜಿ ಮಹಾರಾಜ ಅವರನ್ನು ವೀರ ಪರಾಕ್ರಮಿ, ಮಹಾನ್ ಧೈರ್ಯಶಾಲಿ ಬ್ರಿಟಿಷರೇ ಹೊಗಳಿದ್ದರು. ಇಂಥ ವೀರರ ದೇಶಪ್ರೇಮ, ಧೈರ್ಯಶಾಲಿ ಗುಣ, ದೇಶಭಕ್ತಿ ಬಗ್ಗೆ ಮುಂದಿನ ಪೀಳಿಗೆಗೆ ಸಮರ್ಪಕ ಮತ್ತು ಸರಿಯಾದ ರೀತಿ ಮನವರಿಕೆ ಮಾಡಿಕೊಡುವ ಕಾರ್ಯ ನಡೆಯಬೇಕು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಶಂಕರಗೌಡ ಹರವಿ ಅವರು ಹೇಳಿದರು.
ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರು ಯಾರನ್ನೂ ಹೊಗಳಿದವರಲ್ಲ. ಅದರಲ್ಲೂ ಭಾರತೀಯರನ್ನು ಹೊಗಳಿದವರಲ್ಲ. ಆದರೆ, ಛತ್ರಪತಿ ಶಿವಾಜಿ ಮಹಾರಾಜರನ್ನು ವೀರ ಪರಾಕ್ರಮಿ, ಧೈರ್ಯಶಾಲಿ ಎಂದು ಬಣ್ಣಿಸಿದ್ದರು. ಇದು ಶಿವಾಜಿ ಅವರ ಸಾಮರ್ಥ್ಯ, ವ್ಯಕ್ತಿತ್ವನ್ನು ತೋರಿಸುತ್ತದೆ ಎಂದು ವಿವರಿಸಿದರು.
ವಿಶೇಷ ಉಪನ್ಯಾಸನ ನೀಡಿದ ವೆಂಕಟರಾವ್ ನಿಂಬಾಳ್ಕರ್ ಅವರು, ಶಿವಾಜಿ ಮಹಾರಾಜ ಈ ದೇಶದ ಸಮಸ್ತ ಜನತೆಗೆ ಸೇರಿದವರು. ಅವರು ಜಾತಿ, ಜನಾಂಗ, ರಾಜ್ಯಕ್ಕೆ ಸೀಮಿತರಾದವರಲ್ಲ.
ಮಹಾರಾಷ್ಟ್ರದಲ್ಲಿ ಅವರನ್ನು ದೈವತ್ವಕ್ಕೆ ಏರಿಸಿದ್ದಾರೆ. ಶಿವಾಜಿ ಅವರನ್ನು ಸ್ಮರಣೆ ಮಾಡುತ್ತಾರೆ. ಆದಿಲ್ ಷಾ, ಮೊಗಲರು ಮತ್ತು ಬ್ರಿಟಿಷರಿಂದ ದೌರ್ಜನ್ಯ ವಿರುದ್ಧ ಸಿಡಿದು ಹಿಂದು ಸಂಸ್ಕೃತಿ ರಕ್ಷಣೆ ಮಾಡಿದ ವೀರ ಶಿವಾಜಿ ಮಹಾರಾಜರು ಎಂದು ನುಡಿದರು.
ಅಧ್ಯಕ್ಷತೆಯನ್ನು ಶಾಸಕ ಸಯ್ಯದ್ ಯಾಸಿನ್ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ಶಿವಾಜಿ ಮಹಾರಾಜರ ಭಾವಚಿತದ್ರ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.