ADVERTISEMENT

ಭಯದಲ್ಲಿ ಸತ್ಯ ಹೇಳಿದ ಕವಿಗಳು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಶಿವಮೊಗ್ಗ: ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಕವಿಗಳು ಆತಂಕ ಮತ್ತು ಭಯದ ನಡುವೆಯೇ ಪ್ರಖರ ಸತ್ಯಗಳನ್ನು ಹೇಳಿದರು ಎಂದು ಜಾನಪದ ತಜ್ಞ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಶುಕ್ರವಾರ ಕನ್ನಡಭಾರತಿ ವಿಭಾಗ ಹಮ್ಮಿಕೊಂಡಿದ್ದ ~ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯ: ಮರುಚಿಂತನೆ~ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.

ಸಾಹಿತ್ಯ ಮಾನವೀಯತೆಯನ್ನು ಪ್ರತಿಪಾದಿಸುತ್ತವೆ. ಮನುಕುಲದ ಏಳಿಗೆಗೆ ಪ್ರೇರಕ ಚಿಂತನೆಗಳು ಕನ್ನಡ ಸಾಹಿತ್ಯದಲ್ಲಿವೆ ಎಂದ ಅವರು, ಜಾತಿಪದ್ಧತಿ ಮತ್ತು ಲಿಂಗಭೇದ ನೀತಿಗಳು ಕೆಟ್ಟ ಇತಿಹಾಸವನ್ನು ನಿರ್ಮಿಸಿವೆ ಎಂದರು. ಪಂಪ, ಕುಮಾರವ್ಯಾಸ ವಿಶ್ವಮಟ್ಟದ ಕವಿಗಳು. ಬಸವಣ್ಣನಿಗೆ ಸರಿಸಾಟಿ ಮತ್ತೊಬ್ಬ ಸಂತನಿಲ್ಲ ಎಂದರು. ವಿಚಾರಸಂಕಿರಣ ಉದ್ಘಾಟಿಸಿದ ಕುಲಪತಿ ಪ್ರೊ.ಎಸ್.ಎ. ಬಾರಿ ಮಾತನಾಡಿದರು.
 
ಕನ್ನಡ ಭಾರತಿಯ ನಿರ್ದೇಶಕ ಪ್ರೊ.ಸಣ್ಣರಾಮ ಅಧ್ಯಕ್ಷತೆ ವಹಿಸಿದ್ದರು.  ಡಾ.ಶಿವಾನಂದ ಕೆಳಗಿನಮನಿ ಸ್ವಾಗತಿಸಿದರು. ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ವಂದಿಸಿದರು. ಶ್ವೇತಾ ಮತ್ತು ತಂಗರಾಜು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.