ADVERTISEMENT

ಭಾರತೀಯರೆಲ್ಲ ಅಂಬೇಡ್ಕರ್‌ಗೆ ಋಣಿ: ಸವದಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಕೊಪ್ಪಳ: ಜಗತ್ತಿನಲ್ಲಿಯೇ ಅತ್ಯಂತ ಉತ್ತಮವಾದ ಸಂವಿಧಾನವನ್ನು ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತೀಯರೆಲ್ಲ ಋಣಿಯಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್.ಸವದಿ ಹೇಳಿದರು.

ಅವರು 63ನೇ ಗಣರಾಜ್ಯೋತ್ಸವದ ಅಂಗವಾಗಿ ಗುರುವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

1947ರ ಆ.15ರಂದು ಲಭಿಸಿದ ಸ್ವಾತಂತ್ರ್ಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ದೊಡ್ಡ ಸವಾಲು ದೇಶದ ಮುಂದಿತ್ತು. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಸಂಬಂಧ ಸಂವಿಧಾನ ರಚನಾ ಸಮಿತಿ ಅಸ್ತಿತ್ವಕ್ಕೆ ಬಂದಿತು. ಜಗತ್ತಿನ ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ ಡಾ.ಅಂಬೇಡ್ಕರ್ ನೇತೃತ್ವದ ಸಮಿತಿ ಶ್ರೇಷ್ಠ ಸಂವಿಧಾನ ರಚಿಸಿತು ಎಂದು ಹೇಳಿದರು.

ದೇಶದ ಸಂವಿಧಾನದಲ್ಲಿ ಹೇಳಿರುವಂಥ ಆಶೋತ್ತರಗಳಿಗೆ ಬದ್ಧವಾಗಿ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ. ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವತ್ತ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಅವರು ಪೊಲೀಸ್, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ವಿವಿಧ ಶಾಲಾ ಮಕ್ಕಳು ನೀಡಿದ ಗೌರವ ವಂದನೆಯನ್ನು ಸ್ವೀಕರಿಸಿದರು.

ಸಂಸತ್‌ಸದಸ್ಯ ಶಿವರಾಮಗೌಡ, ಶಾಸಕ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎನ್.ಬಿಲ್ಗಾರ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್. ಕಾಕನೂರು ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.