ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರ ಸೇರಿದಂತೆ ಮರಳಿ ಹೋಬಳಿ ವ್ಯಾಪ್ತಿಯ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಯ್ಲಿನ ಹಂತಕ್ಕೆ ಬಂದಿದ್ದ ಬತ್ತ ಹಾನಿಗೀಡಾಗಿದೆ.
ಇದ್ದಕ್ಕಿದ್ದಂತೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿಯಿತು. ಎರಡು ಗಂಟೆಗೂ ಅಧಿಕ ಕಾಲ ಎಡಬಿಡದೇ ಸುರಿಯಿತು. ಶ್ರೀರಾಮನಗರ, ಗುಂಡೂರು, ಸಿಂಗನಾಳ, ಹೊಸಕೇರಿ, ಹೊಸಕೇರಿ ಕ್ಯಾಂಪ್, ಹಣವಾಳ, ಮುಸ್ಟೂರು, ಡಗ್ಗಿ, ಪ್ರಗತಿನಗರ, ಮರಳಿ, ಕಲ್ಗುಡಿ, ಆಚಾರನರಸಾಪುರ, ಹೆಬ್ಬಾಳ ಮೊದಲಾದ ಗ್ರಾಮಗಳಲ್ಲಿನ ಬತ್ತದ ಬೆಳೆ ನೆಲಕ್ಕೊರಗಿದೆ.
ತಹಶೀಲ್ದಾರ್ ಸಿ.ಡಿ. ಗೀತಾ, `ಶುಕ್ರವಾರ ರಾತ್ರಿ ಮಳೆ ಸುರಿದ ವರದಿಯಾಗಿದೆ. ಆದರೆ ಹಾನಿಯಾದ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಕಂದಾಯ ನಿರೀಕ್ಷಕ ಮತ್ತು ಗ್ರಾಮಲೆಕ್ಕಿಗರಿಂದ ಮಾಹಿತಿ ಪಡೆಯಲಾಗುತ್ತಿದೆ~ ಎಂದು ತಿಳಿಸಿದರು.
ಜನವರಿಯಿಂದ ಇಲ್ಲಿಯವರೆಗೂ ರೈತನಿಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದೆ. ತುಂಗಭದ್ರಾ ಆಶ್ರಯದ ಪ್ರದೇಶದ ಬತ್ತದ ಬೆಳೆ ಹಾನಿಗೊಳಗಾಗುತ್ತಿದೆ. ವಾತಾವರಣದ ವೈಪರೀತ್ಯದಿಂದಾಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.
ಜವವರಿಯಲ್ಲಿ ವಿಪರೀತವಾದ ಚಳಿಯಿಂದ ತೆನೆ ಬೇಗ ಬಿಚ್ಚಿಕೊಳ್ಳದೇ ಶೇ. 5ರಷ್ಟು ಹಾನಿಯಾಗಿತ್ತು. ಬಳಿಕ ತುಂಗಭದ್ರಾ ಜಲಾಶಯದಿಂದ ರೈತರು ಹೆಚ್ಚಿನ ಪ್ರಮಾಣದ ನೀರು ಬಯಸಿದ್ದರೂ ಏ. 10ಕ್ಕೆ ಸ್ಥಗಿತಗೊಳಿಸಲಾಗಿತ್ತು ಎಂದು ರೈತ ಎನ್. ಸುಬ್ರಹ್ಮಣ್ಯ ವಿವರಿಸಿದರು.
ಈ ಸಮಸ್ಯೆ ಸಾಲದೆಂಬಂತೆ ಇದೀಗ ಬೆಳೆದು ಕೊಯ್ಲಿಗೆ ಬಂದು ನಿಂತ ಬತ್ತವೂ ಮಳೆಯಿಂದ ಹಾಳಾಗಿದೆ ಎಂದು ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.