ಹಾಸನ: ಭೂ ಪರಿವರ್ತನೆ ಸಂಬಂಧ ಉಂಟಾದ ಗೊಂದಲ ನಿವಾರಿಸುವ ಉದ್ದೇಶದಿಂದ ಸೋಮವಾರ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭೂ ಮಾಲೀಕರ ಸಭೆ ನಡೆಯಿತು. ಸಭೆಯಲ್ಲಿ ಭೂ ಪರಿವರ್ತನೆಗೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ತುಂಡು ಭೂಮಿಯ ಪರಿವರ್ತನೆಗೆ ಪರವಾನಿಗೆ ನೀಡದಿರುವ ಹಿನ್ನೆಲೆಯಲ್ಲಿ ನಗರದ ಸುತ್ತಮುತ್ತ ಅನೇಕ ಅಕ್ರಮ ನಿವೇಶನಗಳು ಸೃಷ್ಟಿಯಾಗುತ್ತಿದ್ದವು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು ಎಂದು ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ ತಿಳಿಸಿದರು.
`ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿ ಹಲವು ತಿಂಗಳಾದರೂ ನಮಗೆ ಅನುಮತಿ ನೀಡಿಲ್ಲ. ಹೀಗಿದ್ದರೆ ನಾವು ಮನೆಗಳನ್ನು ನಿರ್ಮಿಸುವುದಾದರೂ ಹೇಗೆ? ಎಂದು ಸಭೆಯಲ್ಲಿದ್ದ ಭೂ ಮಾಲೀಕರು ಪ್ರಶ್ನಿಸಿದರು.
ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಹುಡಾ ನಡುವೆ ಬಂದಿರುವ ಗೊಂದಲ ನಿವಾರಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿ ಮಾಡುವುದು ಸೂಕ್ತ.
ಇದರಿಂದ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿ ಇಬ್ಬರೂ ಸೇರಿ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಬಹುದು~ ಎಂದರು. ಈ ಪ್ರಸ್ತಾಪಕ್ಕೆ ಸಭೆ ಅನುಮೋದನೆ ನೀಡಿತು.ಭೂ ಪರಿವರ್ತನೆಗೆ ಮಂಜೂರಾತಿ ನೀಡಬಾರದು ಎಂದು ಉಸ್ತುವಾರಿ ಸಚಿವರಾಗಲಿ ಸ್ಥಳೀಯ ಶಾಸಕರಾಗಲಿ ಆದೇಶ ನೀಡಿಲ್ಲ ಎಂದು ಸಭೆಯಲ್ಲಿ ರೈತರಿಗೆ ಮನವರಿಕೆ ಮಾಡಿ ಕೊಡಲಾಯಿತು.
ತುಂಡು ಭೂಮಿ ಪರಿವರ್ತನೆಗೆ120 ಅರ್ಜಿಗಳು ಬಂದಿವೆ. ಸೂಕ್ತ ಪರಿಶೀಲನೆ ಬಳಿಕ ಈ ಅರ್ಜಿಗಳನ್ನು ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿಯನ್ನು ವಿನಂತಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಜೂ.8ರಂದು ಕಂದಾಯ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.