ADVERTISEMENT

ಭೂ ಸ್ವಾಧೀನ ಕೈಬಿಡಲು ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬಳ್ಳಾರಿ: ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಆರಂಭಿಸಲಿರುವ ಉಕ್ಕು ಕಾರ್ಖಾನೆಗಾಗಿ ತಾಲ್ಲೂಕಿನ ವೇಣಿವೀರಾಪುರ, ಜಾನೆಕುಂಟೆ ಗ್ರಾಮ ವ್ಯಾಪ್ತಿಯ 1,100 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ರೈತರು ಸೋಮವಾರ  ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

ಎನ್‌ಎಂಡಿಸಿಯ ಉಕ್ಕಿನ ಕಾರ್ಖಾನೆಗಾಗಿ ಸರ್ಕಾರ 2,700 ಎಕರೆ ಭೂಮಿ ಸ್ವಾಧೀನಕ್ಕೆ ಆದೇಶ ನೀಡಿದ್ದು, ಉದ್ದೇಶಿತ ಭೂಮಿಯು ರಾಷ್ಟ್ರೀಯ ಹೆದ್ದಾರಿ-63ರ ಪಕ್ಕದಲ್ಲೇ ಇದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಅಲ್ಲಿಪುರ ಕೆರೆ ಮತ್ತು ಕೆಲವು ಶಿಕ್ಷಣ ಸಂಸ್ಥೆಗಳು, ಹೊರ ವರ್ತುಲ ರಸ್ತೆ ಮತ್ತಿತರ ಸಾರ್ವಜನಿಕ ಸ್ಥಳಗಳ ವ್ಯಾಪ್ತಿಯಲ್ಲಿಯೇ ಈ ಜಾಗ ಇದೆ. ಉದ್ದೇಶಿತ 2700 ಎಕರೆ ಭೂಮಿಯಲ್ಲಿ 1100 ಎಕರೆ ಭೂಮಿ ರಾಷ್ಟ್ರೀಯ ಹೆದ್ದಾರಿ-63ರ ಪಕ್ಕದಲ್ಲೇ ಇದ್ದು, ಹೆದ್ದಾರಿಯ 2 ಕಿ.ಮೀ. ಒಳಭಾಗದಲ್ಲಿ ಕೈಗಾರಿಕೆಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು  ಕೋರಿದ್ದಾರೆ.

ಕುಡುತಿನಿ ಗ್ರಾಮದ ಸುತ್ತ ಬ್ರಹ್ಮಿಣಿ, ಬಿಟಿಪಿಎಸ್, ಅರ್ಸೆಲರ್ ಮಿತ್ತಲ್ ಮತ್ತಿತರ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಈಗಾಗಲೇ ಒಟ್ಟು 11 ಸಾವಿರ ಎಕರೆಗೂ ಅಧಿಕ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು, ಇದೀಗ ಮತ್ತಷ್ಟು ಭೂಮಿ ವಶಪಡಿಸಿಕೊಳ್ಳುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.

ಭೂಮಿಯ ಬೆಲೆ ಪ್ರತಿ ಎಕರೆಗೆ ಕನಿಷ್ಠ ರೂ 70ರಿಂದ 75 ಲಕ್ಷ ಇದ್ದು,  ಕಡಿಮೆ ದರ ನೀಡಿ ಖರೀದಿಸಿದರೆ ರೈತರಿಗೆ  ಸಮಸ್ಯೆ ಆಗಲಿದೆ ಎಂದಿದ್ದಾರೆ. ಮಹೇಶ ಅಗಿವಾಲ್, ಕೆ.ರಾಮಕೃಷ್ಣ, ರಾಮನಗೌಡ, ನಂದೀಶಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.