ADVERTISEMENT

ಭ್ರಷ್ಟಾಚಾರ ವಿರೋಧಿಸಿ ಯುವಕರ ಧರಣಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಚಿಕ್ಕಮಗಳೂರು:  ವಿದೇಶದಲ್ಲಿರುವ ಕಪ್ಪುಹಣವನ್ನು ಮರಳಿ ದೇಶಕ್ಕೆ ತರಬೇಕೆಂದು ಒತ್ತಾಯಿಸಿ, ಭ್ರಷ್ಟಾಚಾರ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ~ಭ್ರಷ್ಟಾಚಾರ ವಿರುದ್ಧ ಯುವ ಸಂಘಟನೆ~ಯ ಕಾರ್ಯಕರ್ತರು ಧರಣಿ ನಡೆಸಿದರು.

ಆರು ತಿಂಗಳಿನಿಂದ ಭ್ರಷ್ಟಾಚಾರ ವಿರೋಧಿಸಿ ಯುವಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತ್ರ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಮುಂದಾಗಿಯೇ ಇಲ್ಲ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ವಿದೇಶದಲ್ಲಿರುವ ಕಪ್ಪುಹಣವನ್ನು ಮರಳಿ ದೇಶಕ್ಕೆ ತಂದು ದೇಶದ ಸಂಪತ್ತು ಎಂದು ಘೋಷಿಸಬೇಕು. ಆ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದರು.

ದೇಶದಲ್ಲಿರುವ ಕಪ್ಪು ಹಣ ನಿಯಂತ್ರಿಸಲು ಅನುಕೂಲವಾಗುವಂತೆ ರೂ. 1 ಸಾವಿರ ಮತ್ತು 500ರ ಮುಖಬೆಲೆ ನೋಟುಗಳನ್ನು ನಿಷೇಧಿಸಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಹೊನಕೇರಿ ಅವರು ಸ್ವೀಕರಿಸಿದರು.

~ಭ್ರಷ್ಟಾಚಾರ ವಿರುದ್ಧ ಸಂಘಟನೆ~ಯ ಸಂಚಾಲಕ ಎಂ.ಸಿ.ಜಗದೀಶ್, ಮುಖಂಡರಾದ ಸೀತಾರಾಮ್ ಭರಣ್ಯ, ದಯಾನಂದ ತಿರುಗಣ, ಸಂತೋಷ್ ಕೊಟ್ಯಾನ್, ಕೋಟೆರಾಜು, ಪ್ರದೀಪ್, ಮಂಜುನಾಥ ಪ್ರತಿಭಟನೆಯಲ್ಲಿದ್ದರು.
ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ನ. 1ರಂದು ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ಮುಖಂಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.