ADVERTISEMENT

`ಮಕ್ಕಳಿಗೆ ಸಂಸಾರದ ಜವಾಬ್ದಾರಿ ಸಲ್ಲ'

ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಬಿ.ಎ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 10:49 IST
Last Updated 20 ಜುಲೈ 2013, 10:49 IST

ಚಿಕ್ಕಮಗಳೂರು: ಬಾಲ್ಯ ವಿವಾಹದ ಮೂಲಕ ಮಕ್ಕಳಿಗೆ ಸಂಸಾರದ ಜವಾಬ್ದಾರಿ ಹೊರಿಸುವುದು ಅವರ ಸಾಮರ್ಥ್ಯ ಮೀರಿದ ಕಾರ್ಯ. ಬಾಲ್ಯ ವಿವಾಹ ಪದ್ಧತಿ ತ್ವರಿತಗತಿಯಲ್ಲಿ ಅಂತ್ಯಗೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಎ.ಪಾಟೀಲ್ ಹೇಳಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿ ನೇಮಕವಾಗಿರುವ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳೊಂದಿಗೆ ನಡೆಸುವ ಯಾವುದೇ ಒಪ್ಪಂದ, ವ್ಯವಹಾರಗಳಿಗೆ ಮಾನ್ಯತೆ ಇರುವುದಿಲ್ಲ. ಕಿರಾಣಿ ಅಂಗಡಿಗಳಲ್ಲಿಯೂ ಮಕ್ಕಳಿಗೆ ಸಾಲ ನೀಡಲೂ ಹಿಂಜರಿಯುತ್ತಾರೆ. ಹೀಗಿದ್ದರೂ, ಮಕ್ಕಳನ್ನು ಬಾಲ್ಯ ವಿವಾಹಕ್ಕೊಳಪಡಿಸಿ, ಅವರ ಮೇಲೆ ಜವಾಬ್ದಾರಿ ಹೊರಿಸುವುದು ಅವರ ಸಾಮರ್ಥ್ಯಕ್ಕೆ ಮೀರಿದ ಸಂಗತಿಯಾಗಿದೆ ಎಂದು ಹೇಳಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರಲ್ಲೇ ಜಾರಿಗೆ ಬಂದಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ನೇತೃತ್ವದ ಸಮಿತಿ ಈ ಕಾಯ್ದೆಯ ಅನುಷ್ಠಾನಕ್ಕೆ ದೃಢ ನಿರ್ಧಾರ ಕೈಗೊಂಡಿದೆ. ಇದರ ಜಾರಿಗೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳನ್ನು ನಿಷೇಧ ಅಧಿಕಾರಿಗಳಾಗಿ ನೇಮಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಬಾಲ್ಯ ವಿವಾಹ ಪದ್ಧತಿಯ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ನಾಯಕ್ ಮಾತನಾಡಿ, ಕುಟುಂಬದ ಆಸ್ತಿ ಬೇರೆಯವರ ಪಾಲಾಗದಂತೆ ತಮ್ಮಲ್ಲೇ ಇರಲಿ ಎಂಬ ಮನೋಭಾವನೆಯೇ ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣವಾಗಿದೆ. ಪಾಲಕರು ಜಾಗೃತರಾಗಿ, ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಈ ಪಿಡುಗು ತೊಲಗಲು ಸಾಧ್ಯವಿದೆ ಎಂದು ಹೇಳಿದರು.

ಜಿ.ಪಂ. ಸಿಇಒ ಪಿ.ಶಿವಶಂಕರ್ ಮಾತನಾಡಿ, ಸಾಮಾಜಿಕ ಪಿಡುಗು ಹೋಗಲಾಡಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ. ರಾಜ್ಯಮಟ್ಟದಿಂದ ಗ್ರಾಮ ಮಟ್ಟದವರೆಗೆ ಇದರಡಿ ನಿಷೇಧ ಅಧಿಕಾರಿಗಳನ್ನು ನೇಮಿಸಲಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಸಬಲೀಕರಿಸುವುದರಿಂದ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಯಾಗಲಿದೆ. ಈ ಪಿಡುಗಿನ ಬಗ್ಗೆ ಆಂದೋಲನ ಮೂಡಿ, ಜನರಲ್ಲಿ ಜಾಗೃತಿಯಾಗಬೇಕು.

ಕೆಳ ಹಂತದ ಅಧಿಕಾರಿಗಳು ಇದರಲ್ಲಿ ಸಕ್ರಿಯವಾಗಿ ಪಾತ್ರ ವಹಿಸಬೇಕು ಎಂದರು.ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಧೀಶ ಎಂ.ಮಹದೇವಯ್ಯ, ವಕೀಲರ ಸಂಘದ ಕಾರ್ಯದರ್ಶಿ ಐ.ಎಸ್.ತೇಜಸ್ವಿ, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಚ್.ಜೆ.ಚಂದ್ರಶೇಖರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT