ADVERTISEMENT

ಮರಳು ಲಾರಿ ಹರಿಸುವ ಪ್ರಯತ್ನ: ಗ್ರಾಮಲೆಕ್ಕಾಧಿಕಾರಿ ಪಾರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ತೋವಿನಕೆರೆ: ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಲಾರಿ ತಡೆಯಲು ಪ್ರಯತ್ನಿಸಿದ ಗ್ರಾಮಲೆಕ್ಕಾಧಿಕಾರಿ ಮೇಲೆ ಲಾರಿ ಹರಿಸಲು ಪ್ರಯತ್ನಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.  ಗ್ರಾಮಲೆಕ್ಕಾಧಿಕಾರಿ ಜಯರಾಮಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಧುಗಿರಿ, ಆಂಧ್ರಪ್ರದೇಶದ ಕಡೆಯಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಬರುವ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಕೆಲವು ತಿಂಗಳಿನಿಂದ ನಡೆಯುತ್ತಿದೆ. ಕಂದಾಯ ಇಲಾಖೆ ಸಿಬ್ಬಂದಿ ಸೋಮವಾರ ರಾತ್ರಿ ಕರ್ತವ್ಯ ನಿರತರಾಗಿದ್ದರು. ಮಂಗಳವಾರ ಮುಂಜಾನೆ ಎರಡು ಗಂಟೆ ಸಮಯದಲ್ಲಿ ಲಾರಿಯೊಂದು ವೇಗವಾಗಿ ಬರುತ್ತಿದ್ದನ್ನು ಗಮನಿಸಿದ ಸಿದ್ದರಬೆಟ್ಟ ಗ್ರಾಮಲೆಕ್ಕಾಧಿಕಾರಿ ಜಯ ರಾಮಯ್ಯ ತಡೆಯಲು ಪ್ರಯತ್ನಿಸಿದರು. ಚಾಲಕ ವೇಗವಾಗಿ ಲಾರಿಯನ್ನು ಚಲಾಯಿಸಿದ್ದು, ಜಯರಾಮಯ್ಯ ತಪ್ಪಿಸಿಕೊಂಡಿದ್ದಾರೆ. ಅವರ ಕೈಗೆ ತೀವ್ರ ಗಾಯವಾಗಿದೆ. ತಹಶೀಲ್ದಾರ್ ವಿ.ಪಾತರಾಜು ಸ್ಥಳಕ್ಕೆ ಧಾವಿಸಿದರು. ಲಾರಿ ಚಾಲಕ ಪತ್ತೆಯಾಗಿಲ್ಲ. ಅಕ್ರಮವಾಗಿ ಮರಳು ತುಂಬಿದ ಲಾರಿಗಳು ರಾತ್ರಿ ಸಮಯ ಹೆಚ್ಚು ಓಡಾಡುತ್ತಿವೆ. ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಕಾವಲು ಹಾಕಿದ್ದು, ರಾತ್ರಿ 10ಕ್ಕೂ ಹೆಚ್ಚು ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ವಿ.ಪಾತರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT