ADVERTISEMENT

ಮರಿಯಾನೆ ಆರೋಗ್ಯ ಏರುಪೇರು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ಕುಶಾಲನಗರ: ಕೊಡಗಿನ ಹಾರಂಗಿ ಬಳಿಯ ಕಾಡಿನಲ್ಲಿ 11 ತಿಂಗಳ ಹಿಂದೆ ತಾಯಿಯಿಂದ ಬೇರ್ಪಟ್ಟು, ಕುಶಾಲನಗರ ಸಮೀಪದ ಆನೆಕಾಡು ಅರಣ್ಯ ಶಿಬಿರದಲ್ಲಿ ಆರೈಕೆಯಲ್ಲಿರುವ ಮರಿಯಾನೆ `ಶಿವ~ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಆಹಾರ ಸೇವನೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರವೂ ತೀವ್ರ ನಿಗಾ ವಹಿಸಿ ಚಿಕಿತ್ಸೆ ಕೊಡಿಸುತ್ತಿದೆ.

ಈ ಮರಿಯಾನೆ ಕುಶಾಲನಗರ- ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿನ ಆನೆಕಾಡು ಶಿಬಿರದಲ್ಲಿ ಮಾವುತರ ಪ್ರೀತಿಗೆ ಪಾತ್ರವಾಗಿತ್ತು. ಶನಿವಾರ ಬೆಳಿಗ್ಗೆ ಮಾವುತರ ಮನೆಯಂಗಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೆನ್ನಿಗೆ ತೀವ್ರವಾದ ಪೆಟ್ಟು ಮಾಡಿಕೊಂಡಿದೆ. ಮಾವುತ ಚಂದ್ರು ಅವರ  ಆರೈಕೆಯಲ್ಲಿರುವ `ಶಿವ~ನಿಗೆ ಸ್ವತಂತ್ರವಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ.

ಇಡೀ ದೇಹ ನಿತ್ರಾಣವಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಗಮಿಸಿದ ವನ್ಯಜೀವಿ ವೈದ್ಯ ಡಾ.ಉಮಾಶಂಕರ್ ನೇತೃತ್ವದ ತಂಡವು ತಪಾಸಣೆ ನಡೆಸಿದೆ. ವೈದ್ಯರು ಸ್ಥಳದಲ್ಲಿಯೇ ಬೀಡುಬಿಟ್ಟು ಗ್ಲೂಕೋಸ್ ನೀಡುತ್ತಿದ್ದಾರೆ. ಈಗ ವೈದ್ಯರ ಆರೈಕೆ ನಂತರ `ಶಿವ~ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಾನುವಾರ ಬೆಳಿಗ್ಗೆ ಸ್ವಲ್ಪ ಪ್ರಮಾಣದಲ್ಲಿ ಹಾಲು, ರಾಗಿ ಮುದ್ದೆ ಸೇವಿಸಿದ್ದಾನೆ. ಇದರಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಡಾ.ಉಮಾಶಂಕರ್ ತಿಳಿಸಿದ್ದಾರೆ.

ಮರಿಯಾನೆ `ಶಿವ~ನ ಆರೋಗ್ಯದ ಬಗ್ಗೆ ಇಲಾಖೆ ತೀವ್ರ ನಿಗಾ ವಹಿಸಿದೆ ಎಂದು ಕುಶಾಲನಗರ ವಲಯದ ಆರ್‌ಎಫ್‌ಓ ಎಂ.ಎಂ.ಅಚ್ಚಪ್ಪ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.