ADVERTISEMENT

ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕರೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಶಿವಮೊಗ್ಗ: ಮಹಿಳೆಯರು ತಮ್ಮಲ್ಲಿರುವ ಜ್ಞಾನವನ್ನು ಪರಸ್ಪರ ಹಂಚಿಕೊಂಡು ಮುನ್ನಡೆಯಬೇಕು. ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಧಾವಿಸಬೇಕು. ಈ ಮೂಲಕ ಮಹಿಳಾ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಿಳಿಸಿದರು.

ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಸೋಮವಾರ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಮಹಿಳಾ ಅಭಿವೃದ್ಧಿ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸಂಘ-ಸಂಸ್ಥೆಗಳಿಂದಾಗಿ ಮಹಿಳೆಯರಲ್ಲಿ ಒಗ್ಗಟ್ಟು ಮೂಡಿದ್ದು, ಪುರುಷನಿಗೆ ಸರಿಸಮಾನವಾಗಿ ರಾಜಕೀಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುತ್ತಿದ್ದಾಳೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಮಾತನಾಡಿ, ಇಂದು ಕುಟುಂಬ ಜೀವನದಲ್ಲಿ ಭಾವನೆಗಳು ಛಿದ್ರಗೊಂಡಿವೆ. ಅವುಗಳನ್ನು ಒಟ್ಟಿಗೆ ಸೇರಿಸುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದರು.

ಆರ್ಥಿಕ ಮಟ್ಟ ಹೆಚ್ಚಾದಂತೆ ಕುಟುಂಬ ಕಲಹಗಳು ಉಂಟಾಗುತ್ತಿವೆ. ಆದ್ದರಿಂದ ಗಂಡ-ಹೆಂಡತಿಯರಲ್ಲಿ ಹೊಂದಾಣಿಕೆ ಇದ್ದರೆ ಸಮಾಜದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.

ಗಂಡಸರು ಇಂದು ದುಂದುವೆಚ್ಚ ಮಾಡುವುದು ಹೆಚ್ಚಿದೆ. ಅದನ್ನು ಹಿಡಿತದಲ್ಲಿಡುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹಾಗೆಯೇ, ಮಹಿಳೆ ಕುಟುಂಬವನ್ನು ಭದ್ರವಾಗಿ ಹಿಡಿದಿಡುವುದರಿಂದ ದೇಶ ಸುಭದ್ರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕಿರಣ್ ದೇಸಾಯಿ, ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಚನ್ನಳ್ಳಿ, ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೇಶಕರಾದ ದುಗ್ಗಪ್ಪಗೌಡ, ಜಗದೀಶ್, ಈರಮ್ಮ, ಸರಸ್ವತಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.