ಕೊಪ್ಪಳ: ಕೊಪ್ಪಳವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಕನಸಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮುಂದಿಟ್ಟಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಬದ್ಧ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಪರ ಮತ ಯಾಚನೆಗಾಗಿ ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
50 ವರ್ಷಗಳ ಅವಧಿಯಲ್ಲಿನ ಸರ್ಕಾರಗಳು ಈ ಕ್ಷೇತ್ರಕ್ಕೆ ಬಿಡುಗಡೆ ಮಾಡಿರುವ ಅನುದಾನ ಹಾಗೂ ಸಂಗಣ್ಣ ಕರಡಿ ಬಿಜೆಪಿ ಸೇರಿದಾಗಿನಿಂದ ಬಿಡುಗಡೆ ಮಾಡಿರುವ ಅನುದಾನವನ್ನು ತುಲನೆ ಮಾಡಿದರೆ, ಈ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಎಷ್ಟು ಆಸಕ್ತಿ ವಹಿಸಿದೆ ಹಾಗೂ ಸಂಗಣ್ಣ ಕರಡಿ ಅವರ ಪ್ರಯತ್ನ ಏನು ಎಂಬುದು ಗೊತ್ತಾಗಲಿದೆ ಎಂದರು.
ಈ ಕ್ಷೇತ್ರದ ಉಪ ಚುನಾವಣೆ ರಾಜ್ಯಕ್ಕೆ ಹೊಸ ಸಂದೇಶವನ್ನು ಸಹ ನೀಡಲಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಆಯಾ ಕ್ಷೇತ್ರದ ಶಾಸಕರು ಕೈಗೊಳ್ಳುವ ನಿರ್ಧಾರ ಯಾವ ರೀತಿ ಇರಬೇಕು ಎಂಬುದನ್ನು ಈ ಉಪಚುನಾವಣೆ ಬಿಂಬಿಸುತ್ತದೆ ಎಂದು ಹೇಳಿದರು.
ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿ ಸಂಗಣ್ಣ ಕರಡಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.