ADVERTISEMENT

ಮಾನವನ ದುರಾಸೆ: ಪಕ್ಷಿ ಸಂಕುಲಕ್ಕೆ ಗಂಡಾಂತರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಶ್ರೀರಂಗಪಟ್ಟಣ: ಮಾನವನ ಅತಿಯಾದ ಆಸೆಯಿಂದ ಅರಣ್ಯ ನಶಿಸುತ್ತಿದ್ದು, ಪ್ರಕೃತಿಯ ಭಾಗವೇ ಆಗಿರುವ ಅಪರೂಪದ ಪಕ್ಷಿ ಸಂಕುಲಕ್ಕೆ ಗಂಡಾಂತರ ಎದುರಾಗಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ.ಹರೀಶ್‌ಭಟ್ ಕಳವಳ ವ್ಯಕ್ತಪಡಿಸಿದರು.

 ರಂಗನತಿಟ್ಟು ಪಕ್ಷಿಧಾಮದಲ್ಲಿ ಸೋಮವಾರ ಕರ್ನಾಟಕ ವಿಜ್ಞಾನ ಪರಿಷತ್ತು, ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಟಿ.ಎಸ್.ಛತ್ರದ ಸರ್ಕಾರಿ ಪ್ರೌಢಶಾಲೆಗಳ ಆಶ್ರಯದಲ್ಲಿ ನಡೆದ ~ಸುಸ್ಥಿತ ಜೀವನೋಪಾಯಕ್ಕಾಗಿ ಅರಣ್ಯಗಳು~ ಹಾಗೂ ~ಹಕ್ಕಿ ಸಂಕುಲದ ರಕ್ಷಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಕೆಲವು ಪಕ್ಷಿ ಪ್ರಭೇದಗಳು ಕಣ್ಮರೆಯಾಗಿವೆ. ಇರುವ ಪಕ್ಷಿ ಸಂಕುಲವನ್ನಾದರೂ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ವಿಶೇಷ ಯೋಜನೆ ರೂಪಿಸಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು. ಅರಣ್ಯ ಬೆಳೆಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪರಿಸರ ಕಲುಷಿತವಾಗದಂತೆ, ಜೀವ ಜಗತ್ತಿನ ಕೊಂಡಿ ಕಳಚದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಮಾತನಾಡಿ, ಪಕ್ಷಿಗಳು ಪ್ರಕೃತಿಯ ಆಭರಣಗಳು. ಕರ್ನಾಟಕದಲ್ಲಿ ಅಪರೂಪದ ಪಕ್ಷಿಗಳಿವೆ. ಅವುಗಳನ್ನು ಗುರುತಿಸಿ ಸಂರಕ್ಷಿಸುವ, ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ. ಬೀಜ ಪ್ರಸರಣದಲ್ಲಿ ಪಕ್ಷಿಗಳ ಪಾತ್ರ ಮಹತ್ವದ್ದಾಗಿದೆ.
 
ಪ್ರತಿ ಶಾಲೆಯಲ್ಲಿ ಇಕೋ ಕ್ಲಬ್‌ಗಳ ಮೂಲಕ ಪಕ್ಷಿ ಹಾಗೂ ಪರಿಸರ ಪರಿಚಯ ಕಾರ್ಯಕ್ರಮಗಳು ನಡೆಯಬೇಕು ಎಂದರು. ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ ನಡೆಯಿತು. ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್, ಎನ್.ಮಹದೇವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.