ADVERTISEMENT

ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 5:34 IST
Last Updated 9 ಜೂನ್ 2017, 5:34 IST
ರಾಯಚೂರು ಎಪಿಎಂಸಿ ಪ್ರಾಂಗಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಗುರುವಾರ ನಡೆದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ರೈತರು ಎತ್ತುಗಳನ್ನು ಹುರಿದುಂಬಿಸುತ್ತಿರುವುದು ಗಮನ ಸೆಳೆಯಿತು
ರಾಯಚೂರು ಎಪಿಎಂಸಿ ಪ್ರಾಂಗಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಗುರುವಾರ ನಡೆದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ರೈತರು ಎತ್ತುಗಳನ್ನು ಹುರಿದುಂಬಿಸುತ್ತಿರುವುದು ಗಮನ ಸೆಳೆಯಿತು   

ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಮೂರು ದಿನಗಳ ‘ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ’ವು ಗುರುವಾರ ಅದ್ಧೂರಿಯಾಗಿ ಆರಂಭಗೊಂಡಿತು. ಮುನ್ನೂರು ಕಾಪು ಬಲಿಜ ಸಮಾಜ, ಎಪಿಎಂಸಿ, ಹಟ್ಟಿ ಚಿನ್ನದ ಗಣಿ, ಕನ್ನಡ ಸಂಸೃತಿ ನಿರ್ದೇಶನಾಲಯ ಹಾಗೂ ನಗರಸಭೆಯಿಂದ ಆಯೋಜಿಸಿದ್ದ ಹಬ್ಬದ ಮೊದಲ ದಿನದಂದು ಎತ್ತುಗಳಿಂದ ಒಂದುವರೆ ಟನ್‌ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗದಿಂದ 13 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಗರಿಷ್ಠ 20 ನಿಮಿಷದಲ್ಲಿ ಎತ್ತುಗಳು ಭಾರ ಎಳೆಯುವ ದೂರನ್ನು ಆಧರಿಸಿ ಬಹುಮಾನ ನಿಗದಿಗೊಳಿಸಲಾಗಿತ್ತು. ಸ್ಪರ್ಧೆಗೆ ಬಂದಿದ್ದ ಕಟ್ಟುಮಸ್ತಾದ ಎತ್ತಿನ ಜೋಡಿಗಳು ಆಕರ್ಷಕವಾಗಿದ್ದವು. ಪ್ರತಿವರ್ಷ ನಡೆಯುವ ಸಾಂಸ್ಕೃತಿಕ ಹಬ್ಬಕ್ಕೆ ಎಂದಿನಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಎಪಿಎಂಸಿ ರಸ್ತೆಯುದ್ದಕ್ಕೂ ಹಾಗೂ ವಿವಿಧ ಕಟ್ಟಡಗಳ ಮೇಲಿನಿಂದ ಜನರು ಭಾರ ಎಳೆಯುವ ಸ್ಪರ್ಧೆಯನ್ನು ವೀಕ್ಷಿಸಿದರು.

ಭಾರ ಎಳೆಯುವುದಕ್ಕೆ ಎತ್ತುಗಳನ್ನು ಹುರಿದುಂಬಿಸುತ್ತಿದ್ದ ರೀತಿ ವಿಶೇಷವಾಗಿತ್ತು. ಎತ್ತುಗಳ ಬಲವು ಅವುಗಳನ್ನು ಸಾಕಿದ ರೈತನ ಬಲಕ್ಕೆ ಸಾಕ್ಷಿ ಎಂಬಂತೆ ನೆರೆದಿದ್ದ ಕೃಷಿಕರು ಎತ್ತುಗಳ ಮಾಲೀಕರನ್ನೂ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದರು. ಹುರುಪಿನಿಂದ ಭಾರ ಎಳೆಯುವಾಗ ಎತ್ತುಗಳನ್ನು ಬೆಳೆಸಿದ ರೈತನ ಸಾಮರ್ಥ್ಯಕ್ಕೆ ಜನರು ಬೇಷ್‌ ಎಂದರು.

ADVERTISEMENT

ಕರತಾಡತನ ಮತ್ತು ಶಿಳ್ಳೆ ಸದ್ದು ಸಾಮಾನ್ಯವಾಗಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು. ಮುನ್ನೂರು ಕಾಪು ಬಲಿಜ ಸಮಾಜದ ಅಧ್ಯಕ್ಷ ಎ.ಪಾಪಾರೆಡ್ಡಿ ನೇತೃತ್ವದಲ್ಲಿ ಸಾಂಸ್ಕೃತಿಕ ಹಬ್ಬ ಆಯೋಜನೆಯಾಗಿತ್ತು.

ಮುಂಗಾರು ಸಾಂಸ್ಕೃತಿಕ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿ ಚಿಕ್ಕಸೂಗೂರಿನ ಚೌಕಿಮಠದ ಸಿದ್ಧಲಿಂಗ ಸ್ವಾಮೀಜಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿಂದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಕೇಶವರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಜಿ.ಶೇಖರ ರೆಡ್ಡಿ, ಎನ್.ಶ್ರೀನಿವಾಸ ರೆಡ್ಡಿ, ಪೋಗಲ್ ಚಂದ್ರಶೇಖರ್ ರೆಡ್ಡಿ, ಯು.ಗೋವಿಂದರೆಡ್ಡಿ, ಬಾಯಿಕಾಡ ಶೇಖರರೆಡ್ಡಿ, ವಿಶ್ವನಾಥ ರೆಡ್ಡಿ ಗುರ್ಜಾಪುರ, ತಿರುಮಲರೆಡ್ಡಿ, ಶೇಖರ ರೆಡ್ಡಿ, ಪೆಪ್ಸಿ ಗೋವಿಂದ, ಗುಡ್ಸಿ ನರಸರೆಡ್ಡಿ, ಜನಾರ್ಧನ ರೆಡ್ಡಿ, ಹರವಿ ನಾಗನಗೌಡ ವೇದಿಕೆಯಲ್ಲಿದ್ದರು. ಮುನ್ನೂರು ಕಾಪು ಸಮಾಜದ ಕ್ರೀಡಾ ಅಧ್ಯಕ್ಷ ಪುಂಡ್ಲಾ ನರಸರೆಡ್ಡಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿದರು.

ಒಂದೂವರೆ ಟನ್‌ ಭಾರ ಎಳೆದ ಎತ್ತು
* 3,399 ಅಡಿ ಭಾರ ಎಳೆದ ಬಳ್ಳಾರಿಯ ಶ್ರೀಕಾಕುಳಂ ವೆಂಕಟೇಶ್ವರರಾವ್‌ ಅವರ ಜೋಡಿ ಎತ್ತುಗಳಿಗೆ ₹45 ಸಾವಿರ ನಗದು ಪ್ರಥಮ ಬಹುಮಾನ
* 2,629 ಅಡಿ ಭಾರ ಎಳೆದ ವಿಜಯಪುರದ ಬಸವನ ಬಾಗೇವಾಡಿಯ ಸಂಗನಗೌಡ ಅವರ ಜೋಡಿ ಎತ್ತುಗಳಿಗೆ ₹35 ಸಾವಿರ ನಗದು ದ್ವಿತೀಯ ಬಹುಮಾನ
* 2,309 ಅಡಿ ಭಾರ ಎಳೆದ ರಾಯಚೂರಿನ ವಿನೋದಕುಮಾರ ಅವರ ಜೋಡಿ ಎತ್ತುಗಳಿಗೆ ₹25 ಸಾವಿರ ನಗದು ತೃತೀಯ ಬಹುಮಾನ
* 1,857 ಅಡಿ ಭಾರ ಎಳೆದ ರಾಯಚೂರಿನ ಉಣ್ಣೆ ಬಸವರಾಜ ಅವರ ಜೋಡಿ ಎತ್ತುಗಳಿಗೆ ₹15 ಸಾವಿರ ನಗದು ಚತುರ್ಥ ಬಹುಮಾನ
* 1,590 ಅಡಿ ಭಾರ ಎಳೆದ ರಾಯಚೂರಿನ ದೇವದುರ್ಗದ ಆಂಜನೇಯ ರಾಮದುರ್ಗ ಅವರ ಎತ್ತುಗಳಿಗೆ ₹10 ಸಾವಿರ ನಗದು ಪಂಚಮ ಬಹುಮಾನ

* * 

ಹಬ್ಬ ಆರಂಭವಾದ 17 ವರ್ಷಗಳ ಅವಧಿಯಲ್ಲಿ ಇದೇ ಮೊದಲು ಬಳ್ಳಾರಿ ಎತ್ತುಗಳು ತುಂಬಾ ದೂರಕ್ಕೆ ಭಾರ ಎಳೆದು ಗಮನ ಸೆಳೆದಿವೆ. ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.