ADVERTISEMENT

ಮುರುಕು ಮನೆಯಲ್ಲಿ ಅಂಗನವಾಡಿ !

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST

ತಿಪಟೂರು: ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ತಾಲ್ಲೂಕಿನ ಕರಡಿ ಗ್ರಾಮದ ರಸ್ತೆ ಬದಿ ಮುರುಕು ಮನೆಯೊಂದರ ಮುಂದೆ ಮಕ್ಕಳನ್ನು ಕಾಣಬಹುದು. ಅಂಗನವಾಡಿ ಕಟ್ಟಡ ಸಿದ್ಧವಿದ್ದರೂ; ರಾಜಕೀಯ ಜಿದ್ದಿನಲ್ಲಿ ಸಮಸ್ಯೆ ಎದುರಿಸುತ್ತಿರುವ ಶಿಶುಗಳ ಪಾಡಿದು.

ಬಂಡೆ ಕಾರ್ಮಿಕರ, ರೈತರ ಮಕ್ಕಳೇ ಹೆಚ್ಚಿರುವ ಇಲ್ಲಿ ಈವರೆಗೆ ಅಂಗನವಾಡಿ ಕಟ್ಟಡ ಇರಲಿಲ್ಲ. ಮುರುಕಲು ಮನೆಯಲ್ಲೇ ದಿನ ಸಾಗುತ್ತಿತ್ತು. ಕಡೆಗೂ ಅನುದಾನ ದೊರೆತು ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಉದ್ಘಾಟನೆ ಭಾಗ್ಯ ಕಾಣದೆ ಮಕ್ಕಳು ಅಪಾಯಕಾರಿ ಹಳೆ ಮನೆಯಲ್ಲಿ ಕೂತು ಸೂರಿನಿಂದ ಬಿದ್ದ ಬೆಳಕಿನ ಕಡೆ ನೋಡುವಂತಾಗಿದೆ.

ಕೆಲವೊಮ್ಮೆ  ಹೆಂಚು ಉದುರುತ್ತವೆ, ಮಳೆ ಬಂದರೆ ಸೋರುತ್ತದೆ. ಸೋಗೆಯ ತೇಪೆ ಹಾಕಲಾಗಿದೆ. ಗೋಡೆ ದುರ್ಬಲವಾಗಿದೆ, ಒಳಗೋಡೆ ಕೆಟ್ಟು ಚಿತ್ತಾರ ಬಿಡಿಸಿದೆ. ಆದರೂ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿಲ್ಲ. ಸ್ಥಳೀಯ ರಾಜಕೀಯ ಮುಖಂಡರಿಬ್ಬರ ಜಿದ್ದಾಜಿದ್ದಿನಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಬಿಡುತ್ತಿಲ್ಲ ಎನ್ನಲಾಗಿದೆ.

ಉದ್ಘಾಟನೆ ಆಗದಿದ್ದರೂ ಸರಿ, ಹೊಸ ಕಟ್ಟಡದಲ್ಲಿ ಮಕ್ಕಳನ್ನು ಕಲಿಯಲು ಬಿಡಿ ಎಂದರೂ ಕೇಳುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ `ರಾಜಕಾರಣ~ಕ್ಕೆ ಹೆದರಿ ಮಕ್ಕಳು ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಅನಾಹುತ ಸಂಭವಿಸುವುದಕ್ಕೂ ಮುನ್ನ ಹೊಸ ಕಟ್ಟಡಕ್ಕೆ ಅಂಗನವಾಡಿ ಸ್ಥಳಾಂತರವಾಗಬೇಕು ಎಂದು ಜನರ ಒತ್ತಾಯವಾಗಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT