ADVERTISEMENT

ಮೂಗನೂರ ಗ್ರಾಮದಲ್ಲಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಹನುಮಸಾಗರ: ಸಮೀಪದ ಮೂಗನೂರ ಗ್ರಾಮದಲ್ಲಿ ಭಾನುವಾರ ಸಿದ್ಧಾರೂಢರ  ಹಾಗೂ ಬಸವೇಶ್ವರರ ಜಯಂತಿ ನಿಮಿತ್ತವಾಗಿ ಸಾಮೂಹಿಕ ವಿವಾಹ ಮತ್ತು ಅನೇಕ ಧಾರ್ಮಿಕ ಕಾರ್ಯಕ್ರಗಳು ಜರುಗಿದವು.
ಬೆಳಿಗ್ಗೆ ಶ್ರೀಮಠದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆಯಂತಹ ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಂಭ ಮೆರವಣಿಗೆ ಜರುಗಿದವು.

ಬಳಿಕ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 11 ಜೋಡಿ ವಧುವರರು ಹೊಸ ಬಾಳಿಗೆ ಕಾಲಿಟ್ಟರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧಾರೂಢರ ಹಾಗೂ ಬಸವೇಶ್ವರರ ಭಾವಚಿತ್ರ ಮೆರವಣಿಗೆ, ಶ್ರೀಗಳಿಗೆ ದ್ವಾದಶಮಾನ ತುಲಾಭಾರ ಕಾರ್ಯಕ್ರಮ ಹಾಗೂ ದ್ವಾದಶ ಪೂಜ್ಯರ ಮಂಟಪ ಪೂಜಾ ಕಾರ್ಯಕ್ರಮಗಳು ಜರುಗಿದವು.

ನಂತರ ನಡೆದ ಧರ್ಮಸಭೆಯಲ್ಲಿ ಫಕೀರೇಶ್ವರ ಸ್ವಾಮಿಗಳು ಉಪನ್ಯಾಸ ನೀಡಿದರು. ದಾಂಪತ್ಯ ಜೀವನವನ್ನು ಸರಿಯಾಗಿ ನಿಭಾಯಿಸುವ ಜವಾಬ್ದಾರಿ ರೂಢಿಸಿಕೊಳ್ಳಬೇಕು ಎಂದರು.ಕುದರಿಮೋತಿ, ರೋಣ, ನವಲಗುಂದ, ಗುಳೇದಗುಡ್ಡ, ಜಾಲಿಹಾಳ, ಯಲಬುರ್ಗಾ, ಕುಷ್ಟಗಿ, ಬದಾಮಿ, ನರಗುಂದ, ಬೈರನಹಟ್ಟಿ, ಬೇನಾಳ, ಅಂಕಲಿಮಠದ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ನವ ವಧುವರರನ್ನು ಆಶೀರ್ವದಿಸಿದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಮೆಣಸಗಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರತಿಭಾ ಪಾಟೀಲ್, ಅಪ್ಪನಗೌಡ ಬೋದೂರು ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.