ADVERTISEMENT

ಮೃಗಾಲಯದ ಚಿರತೆಮರಿ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಮೈಸೂರು: ಇಲ್ಲಿಯ ಜಯಚಾಮರಾಜೇಂದ್ರ ಮೃಗಾಲಯದ ಬೇಟೆ ಚಿರತೆ ಮನೆಯಲ್ಲಿ ಸೂತಕದ ಛಾಯೆ ಮುಂದುವರೆದಿದೆ. ಚುರುಕಾಗಿ ಚೆನ್ನಾಟವಾಡಿಕೊಂಡಿದ್ದ ಹೆಣ್ಣು ಚಿರತೆ ಮರಿಯೊಂದು ಮಂಗಳವಾರ ನಸುಕಿನಲ್ಲಿ ಸಾವನ್ನಪ್ಪಿದೆ.

ಈ ಹೆಣ್ಣುಮರಿಯು ~ಬೃಂದಾ~ ಎಂಬ ಬೇಟೆ ಚಿರತೆಯ ಮೂರು ಮರಿಗಳಲ್ಲಿ ಒಂದಾಗಿತ್ತು. ಈ ಮರಿಯು ಕಳೆದ ವಾರ ಮರದ ಮೇಲಿಂದ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿತ್ತು. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕುಂಟುತ್ತ ಓಡಾಡಿಕೊಂಡಿತ್ತು. ಆದರೆ ಮಂಗಳವಾರ ಬೆಳಗ್ಗೆ ಹಠಾತ್ ಆಗಿ ಮೃತಪಟ್ಟಿದೆ.  ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಬಲತೊಡೆಯಲ್ಲಿ ಹೆಚ್ಚಿನ ಊತವಿರುವುದು ಕಂಡುಬಂದಿದ್ದು, ಸವಿವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

`2011ರ ಏಪ್ರಿಲ್ 27ರಂದು ಬೃಂದಾ ಚಿರತೆಗೆ ಜನಿಸಿದ್ದ ಮೂರು ಮರಿಗಳ ಪೈಕಿ ಒಂದಾಗಿದ್ದ ಹೆಣ್ಣುಮರಿ ಕಳೆದ ವಾರ ವೃಕ್ಷದ ಮೇಲಿಂದ ಬಿದ್ದಿತ್ತು. ನಂತರ ಬಲಗಾಲಿನ ನೋವಿನಿಂದಾಗಿ ಕುಂಟುತ್ತ ನಡೆದಾಡುತ್ತಿತ್ತು. ಯಾವುದೇ ಆರೋಗ್ಯ ಸಮಸ್ಯೆ ಈ ಮರಿಗೆ ಇರಲಿಲ್ಲ. ದೈಹಿಕವಾಗಿ ಒಳ್ಳೆಯ ಬೆಳವಣಿಗೆಯೂ ಇತ್ತು~ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.

ಜೂನ್ 12ರಂದು ಹೆಣ್ಣು ಚಿರತೆ ಮಾಯಾ ಮೃತಪಟ್ಟಿತ್ತು. ಈ ಚಿರತೆಯ ಐದು ಮರಿಗಳಲ್ಲಿ ಒಂದು ಮರಿ ಜೂನ್ 26ರಂದು ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಒಟ್ಟು ಎರಡು ಗಂಡು, ಎರಡು ಹೆಣ್ಣು ಚೀತಾಗಳು ಮತ್ತು ಎಂಟು ಮರಿಗಳ ಪೈಕಿ,  ಸದ್ಯ ಎರಡು ಗಂಡು, ಒಂದು ಹೆಣ್ಣು ಬೇಟೆ ಚಿರತೆಗಳು ಮತ್ತು ಆರು ಮರಿಗಳು ಮಾತ್ರ ಉಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.