ADVERTISEMENT

ಮೃಗಾಲಯದ ಪ್ರಾಣಿಗಳಿಗೂ ವೃದ್ಧಾಶ್ರಮ!

ಸುಭಾಸ.ಎಸ್.ಮಂಗಳೂರ
Published 25 ಜುಲೈ 2012, 19:30 IST
Last Updated 25 ಜುಲೈ 2012, 19:30 IST
ಮೃಗಾಲಯದ ಪ್ರಾಣಿಗಳಿಗೂ ವೃದ್ಧಾಶ್ರಮ!
ಮೃಗಾಲಯದ ಪ್ರಾಣಿಗಳಿಗೂ ವೃದ್ಧಾಶ್ರಮ!   

ಮೈಸೂರು: ಇಲ್ಲಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿರುವ ವಯಸ್ಸಾದ ಪ್ರಾಣಿಗಳು ಬಾಳ ಮುಸ್ಸಂಜೆಯಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸಲಿ ಎಂಬ ಉದ್ದೇಶದಿಂದ ಅವುಗಳಿಗೆ `ವೃದ್ಧಾಶ್ರಮ~ ನಿರ್ಮಿಸಲು ಮೃಗಾಲಯ ಯೋಜನೆ ರೂಪಿಸಿದೆ.

ಮೃಗಾಲಯದಲ್ಲಿ ಸದ್ಯ 70 ಪ್ರಬೇಧದ 1502 ಪ್ರಾಣಿ, ಪಕ್ಷಿಗಳಿವೆ. ಇವುಗಳಲ್ಲಿ 13 ಪ್ರಾಣಿಗಳಿಗೆ ವಯಸ್ಸಾಗಿದ್ದು, ಬದುಕಿನ ಕೊನೆಯ ಹೊಸ್ತಿಲಲ್ಲಿವೆ. ಇವುಗಳಿಗೆ ನೆಮ್ಮದಿಯ ತಾಣ ಕಲ್ಪಿಸಲು ನಗರ ಹೊರವಲಯದ ಕೂರ್ಗಳ್ಳಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ 100 ಎಕರೆ ಪ್ರದೇಶದ ಮೃಗಾಲಯದಲ್ಲಿ ಐದು ಎಕರೆ ಜಾಗವನ್ನು ವೃದ್ಧಾಶ್ರಮಕ್ಕೆ ಬಳಸಲು ತೀರ್ಮಾನಿಸಲಾಗಿದೆ.

ಏಷ್ಯಾ ಕಪ್ಪು ಕರಡಿ `ಕಾಜೋಲ್~ಗೆ 20 ವರ್ಷ, `ಅಶ್ವತ್ಥ್~ಗೆ 13 ವರ್ಷಗಳಾಗಿವೆ. ಇವು 25-30 ವರ್ಷ ಬದುಕುತ್ತವೆ. ಸ್ಲಾತ್ ಕರಡಿ `ರಾಧಾ~ಗೆ 22, `ರಮಣಿ~ಗೆ 22 ವರ್ಷ ಆಗಿದ್ದು, ಇವುಗಳ ಆಯಸ್ಸು 20-30 ವರ್ಷ. ಇವು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ನಿತ್ರಾಣಗೊಂಡಿವೆ. ಅದೇ ರೀತಿ ಹಲ್ಲಿನ ಸಮಸ್ಯೆಯೂ ಇವುಗಳನ್ನು ಕಾಡುತ್ತಿದೆ.

ಘೇಂಡಾಮೃಗ `ಭೀಮ~ನ ಜೀವಿತಾವಧಿ 35-40 ವರ್ಷ. ಇಲ್ಲಿನ ಭೀಮನಿಗೆ ಈಗ ಭರ್ತಿ 42 ವರ್ಷ. ನೀರಾನೆ `ಸೂರಜ್~ಗೆ 28 ವರ್ಷ. ಮೃಗಾಲಯದಲ್ಲಿ ಒಟ್ಟು ಏಳು ನೀರಾನೆಗಳಿದ್ದು, ಪರಸ್ಪರ ಕಾದಾಟದಲ್ಲಿ `ಸೂರಜ್~ ಗಾಯಗೊಂಡಿದ್ದಾನೆ. ಇನ್ನು ಮಂಡಿ ನೋವಿನಿಂದ ಬಳಲುತ್ತಿರುವ ಹಾಗೂ ಚೈತನ್ಯವನ್ನು ಕಳೆದುಕೊಂಡಿರುವ ಝೀಬ್ರಾಗಳಾದ `ಎಡ್ವರ್ಡ್~ಗೆ 23, `ಎರೆನಾ~ಳಿಗೆ 22 ವರ್ಷ. ಇವುಗಳ ಸರಾಸರಿ ಜೀವಿತಾವಧಿ 20-25 ವರ್ಷ.

15-20 ವರ್ಷ ಸರಾಸರಿ ಜೀವಿತಾವಧಿ ಹೊಂದಿರುವ ಎರಡು ಕೆಂಪು ಕೋತಿಗಳು ಇಲ್ಲಿವೆ. ಅವುಗಳಿಗೆ ಈಗ 21 ವರ್ಷ. ಯಾವುದೇ ರೀತಿಯ ದೈಹಿಕ ಕಾಯಿಲೆಯಿಂದ ಬಳಲುತ್ತಿಲ್ಲ. ಬ್ರೌನ್ ಲೆಮರ್ `ಸ್ಮೋಕಿ~ ಮತ್ತು `ಕವಿತಾ~ಳಿಗೆ ಕ್ರಮವಾಗಿ 26 ಮತ್ತು 19 ವರ್ಷ. ಸಿಂಗಳೀಕಗಳಾದ `ಕೃಷ್ಣ~, `ನೇತ್ರಾ~ ಹಾಗೂ `ಪ್ರಿಯಾ~ಳಿಗೆ ಕ್ರಮವಾಗಿ 21, 28, 28 ವರ್ಷ. ಇವುಗಳ ಜೀವಿತಾವಧಿ 20-25 ವರ್ಷ. ಮೈಮೇಲಿನ ಕೂದಲು ಉದುರಿ ಹೋಗಿವೆ. ದೈಹಿಕ ಚಟುವಟಿಕೆ ಕೊಂಚ ಇಳಿಮುಖವಾಗಿದೆ.

ಮೃಗಾಲಯದ ಕೇಂದ್ರ ಬಿಂದು ಎಂದೇ ಹೆಸರಾಗಿರುವ ಗೊರಿಲ್ಲಾ `ಪೊಲೊ~ಗೆ ಈಗ 39 ವರ್ಷ. ಇದರ ಸರಾಸರಿ ಜೀವಿತಾವಧಿ 35-40 ವರ್ಷ. ಮೃಗಾಲಯದ ವೈದ್ಯರು ಹಾಗೂ ಸಿಬ್ಬಂದಿ ಆರೈಕೆಯಿಂದಾಗಿ `ಪೊಲೊ~ ಆಟವಾಡಿಕೊಂಡು ಹಾಯಾಗಿದೆ.

45-50 ವರ್ಷ ಜೀವಿತಾವಧಿ ಹೊಂದಿರುವ ಚಿಂಪಾಂಜಿಗಳಾದ `ವಾಲಿ~ ಮತ್ತು `ಗಂಗಾ~ಗೆ ಕ್ರಮವಾಗಿ 48 ಹಾಗೂ 51 ವರ್ಷ. ಇವು ಕೂಡ ಚೈತನ್ಯ ಕಳೆದು ಕೊಂಡಿವೆ. ಹೆಣ್ಣು ಆನೆ `ಪದ್ಮಾವತಿ~ಗೆ 57 ವರ್ಷ. ದೈಹಿಕ ಚಟುವಟಿಕೆ ಕಡಿಮೆ ಆಗಿದೆ. ಅದೇ ರೀತಿ `ಮಧುಕೇಶ್ವರ~ ಹುಲಿಯ ದೈಹಿಕ ಶಕ್ತಿ ಕುಂದಿದ್ದು, ನಿತ್ರಾಣಗೊಂಡಿದೆ. ಇದಕ್ಕೆ 16 ವರ್ಷ.

ಇವುಗಳ ಜೊತೆಗೆ ಫ್ಲೆಮಿಂಗೋ, ಪೆಲಿಕಾನ್ಸ್, ಹಂಸ, ಬಾರ್ ಹೆಡೆಡ್ ಗೂಸ್ ಸೇರಿದಂತೆ ಅನೇಕ ಪಕ್ಷಿಗಳು ವೃದ್ಧಾಪ್ಯದ ಸಮಸ್ಯೆ ಎದುರಿಸುತ್ತಿವೆ. ಹಾಗೆಯೇ ಕಿಂಗ್ ಕೋಬ್ರಾ, ಮೊಸಳೆಗಳು ಕೂಡ 15 ವರ್ಷಗಳಿಂದ ಒಂದೇ ಆವಾಸ ಸ್ಥಾನದಲ್ಲಿವೆ.

ಹೊಸ ಮೃಗಾಲಯ
 `ಮೈಸೂರು ಹೊರವಲಯದ ಕೂರ್ಗಳ್ಳಿಯಲ್ಲಿ 100 ಎಕರೆ ಪ್ರದೇಶದಲ್ಲಿ ಹೊಸ ಮೃಗಾಲಯ ಆರಂಭಿಸಲು ಉದ್ದೇಶಿಸಲಾಗಿದೆ. ಈಗಿರುವ ಮೃಗಾಲಯದಲ್ಲಿ ಜನಿಸುವ ನೂತನ ಪ್ರಾಣಿ, ಪಕ್ಷಿಗಳನ್ನು ಅಲ್ಲಿ ಬಿಡಲಾಗುವುದು. ಇದಕ್ಕೆ ಸಂಬಂಧಿಸಿದ ಯೋಜನೆ ಸಿದ್ಧಗೊಂಡಿದ್ದು, ಒಂದೆರಡು ದಿನಗಳಲ್ಲಿ ಅನುಮತಿ ದೊರೆಯಲಿದೆ.
 
ಆ ಪೈಕಿ 5 ಎಕರೆ ಜಾಗದಲ್ಲಿ ವಯಸ್ಸಾದ ಪ್ರಾಣಿಗಳಿಗೆ ನೆಲೆ ಕಲ್ಪಿಸಲಾಗುವುದು. ಪ್ರಾಣಿಗಳೂ ಕೂಡ ನಮ್ಮಂತೆ ಬದುಕಿನ ಕೊನೆಯ ದಿನಗಳನ್ನು ನೆಮ್ಮದಿಯಾಗಿ ಕಳೆಯಲಿ ಎಂಬ ಉದ್ದೇಶದಿಂದ ವೃದ್ಧಾಶ್ರಮ ನಿರ್ಮಿಸಲು ನಿರ್ಧರಿಸಲಾಗಿದೆ~ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ  `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.