ADVERTISEMENT

ಮೇವು ಕೊರತೆ; ಗೋಶಾಲೆ ತೆರೆಯಲು ಹಿಂದೇಟು- ಟೀಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಚಾಮರಾಜನಗರ: `ತಾಲ್ಲೂಕಿನ ಪುಣಜನೂರು ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಹಾಗೂ ಮೇವು ಪೂರೈಕೆ ಇಲ್ಲದಿರುವ ಪರಿಣಾಮ  ಒಂದು ತಿಂಗಳ ಅವಧಿಯಲ್ಲಿ 120ಕ್ಕೂ ಹೆಚ್ಚು ಜಾನುವಾರುಗಳು ಅಸು ನೀಗಿವೆ. ಆದರೆ, ಈ ಭಾಗದಲ್ಲಿ ಗೋಶಾಲೆ ತೆರೆಯಲು ಜಿಲ್ಲಾಡಳಿತ ಹಿಂದೇಟು ಹಾಕಿದೆ~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ದೂರಿದರು.

`ಪುಣಜನೂರು ಸೇರಿದಂತೆ ಮೂಡಳ್ಳಿ, ಕೋಳಿಪಾಳ್ಯ, ದೊಡ್ಡಮೂಡಳ್ಳಿಗಳಲ್ಲಿ ಮೇವು ಇಲ್ಲದೆ ಜಾನುವಾರು ನಿತ್ರಾಣಗೊಂಡು ಸಾವು-ಬದುಕಿನ ನಡುವೆ   ಹೋರಾಟ ನಡೆಸುತ್ತಿವೆ. ಮನೆಯ ಮುಂಭಾಗವೇ ಗೂಟಕ್ಕೆ ಕಟ್ಟಿಹಾಕಿರುವ ಜಾನುವಾರು ಅನುಭವಿಸುತ್ತಿರುವ ಯಾತನೆ ಮರುಕಹುಟ್ಟಿಸುತ್ತಿದೆ. ಅವುಗಳಿಗೆ ಮೇವು ಪೂರೈಸಲಾರದೆ ರೈತರು ದಿಕ್ಕೆಟ್ಟಿದ್ದಾರೆ. ಆದರೆ, ಇಂದಿಗೂ ಜಿಲ್ಲಾಡಳಿತ ಮೇವು ಪೂರೈಸಲು ಮುಂದಾಗಿಲ್ಲ~ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ  ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯದ ಅಂಚಿನಲ್ಲಿಯೇ ಈ ಹಳ್ಳಿಗಳಿದ್ದು, ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿಹೋಗಿದೆ. ಜಿಲ್ಲೆ ಬರಪೀಡಿತ ಎಂದು ಘೋಷಣೆಯಾಗಿ ಆರು ತಿಂಗಳು ಉರುಳಿದರೂ ಗಡಿ ಭಾಗದ ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವು ಪೂರೈಸಲು ಮುಂದಾಗಿಲ್ಲ. ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಮಾತ್ರವೇ ಏಕೈಕ ಗೋಶಾಲೆ ತೆರೆಯಲಾಗಿದೆ. ಆದರೆ, ಅಲ್ಲಿ ಸೂಕ್ತ ನೆರಳು ಮತ್ತು ನೀರು ಪೂರೈಕೆ ವ್ಯವಸ್ಥೆ ಮಾಡಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು ಬರ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ ಎಂದು ದೂರಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.