ADVERTISEMENT

ಮೋಟಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಮೈಸೂರು: `ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ  ಸದನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ~ ಎಂದು ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಎಂ.ಸರಿತಾ ಗುರುವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೋಟಮ್ಮ ತಮಗೆ ಸಿಕ್ಕ ಮಾಹಿತಿಯನ್ನು ಏಕಪಕ್ಷೀಯವಾಗಿ ಗಣನೆಗೆ ತೆಗೆದುಕೊಂಡಿದ್ದಾರೆ. ಆದ್ದರಿಂದಲೇ ನಾನು (ಸರಿತಾ) ಪ್ರೊ.ಶಿವಬಸವಯ್ಯನವರ ಮನೆಗೆ ಹೋಗುವ ಅಗತ್ಯ ಏನಿತ್ತು? ಎಂದು ಸದನದಲ್ಲಿ ಪ್ರಶ್ನಿಸಿದ್ದಾರೆ. ಶಾಸಕಿಯಾಗಿ ನೊಂದ ಮಹಿಳೆಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವುದು ಯಾವ ನ್ಯಾಯ? ಅಶ್ಲೀಲಚಿತ್ರ ನೋಡಿದ ಸಚಿವರಿಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಮೋಟಮ್ಮನವರ ಹೇಳಿಕೆಯ ಬಗ್ಗೆ ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ದೂರು ನೀಡುತ್ತೇನೆ. ಪ್ರಕರಣದಿಂದ ಸಾಕಷ್ಟು ನೊಂದಿರುವ ನಾನು ಮತ್ತು ನಮ್ಮ ಕುಟುಂಬಕ್ಕೆ ಈ ಪ್ರಕರಣದಿಂದ ಮತ್ತಷ್ಟು ಬೇಸರವಾಗಿದೆ. ಮೋಟಮ್ಮ  ವಿರುದ್ಧ ಸಭಾಪತಿಗಳು ಕ್ರಮ ಕೈಗೊಳ್ಳಬೇಕು. ಮೋಟಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

`ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿವಿಧ ತನಿಖೆಗಳಿಂದ ಪ್ರೊ.ಶಿವಬಸವಯ್ಯನವರ ಮೇಲಿನ ಆರೋಪಗಳು ಸಾಬೀತಾಗಿವೆ. ಆದರೆ ಅವರಿಗೆ ಕೊಟ್ಟಿರುವ ಶಿಕ್ಷೆ ಕಡಿಮೆ. ಅವರಿಗೆ ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕು. ಈ ಹಿಂದೆ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರನ್ನು ಭೇಟಿಯಾದಾಗ ನ್ಯಾಯಾಲಯದ ಮೊರೆ ಹೋಗುವಂತೆ ಸಲಹೆ ನೀಡಿದ್ದರು. ಎಲ್ಲದಕ್ಕೂ ನ್ಯಾಯಾಲಯಕ್ಕೆ ಹೋಗುವುದಾದರೆ ಸರ್ಕಾರ, ಸಚಿವರು ಏಕೆ ಇರಬೇಕು~ ಎಂದು ಕೇಳಿದರು. ಪತ್ರಿಕಾಗೋಷ್ಠಿಯಲ್ಲಿ  ಸರಿತಾ ಪತಿ ಡಾ.ವಿಜಯ್‌ಕುಮಾರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.