ADVERTISEMENT

ಯೋಜನೆಯಲ್ಲಿ ಹಣ ದುರ್ಬಳಕೆ ದೂರು: ಶಾಸಕ....

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ರಾಮನಗರ: ಸಾವಯವ ಕೃಷಿ ಮಿಷನ್ ಯೋಜನೆಯಲ್ಲಿ ಹಣ ದುರ್ಬಳಕೆಯಾಗಿದೆ ಎಂಬ ದೂರುಗಳು ಬಂದಿವೆ. ಹಾಗಾಗಿ ಈ ಯೋಜನೆ ಕುರಿತ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಶಾಸಕ ಕೆ.ರಾಜು ಅವರು ತಾಲ್ಲೂಕು ಕೃಷಿ ಅಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.ಈ ಯೋಜನೆಗೆ ತಾಲ್ಲೂಕಿನಲ್ಲಿ ಹೇಗೆ ಕೆಲಸ ಮಾಡಿದೆ. ಎಷ್ಟು ಹಣ ಈ ಯೋಜನೆಯಡಿ ಬಂದಿದ್ದು, ಯಾವ ಯಾವ ಕೆಲಸಕ್ಕೆ ಬಿಡುಗಡೆ ಆಗಿದೆ.

ಈ ಯೋಜನೆಯ ಫಲಾನುಭವಿಗಳು ಯಾರು. ಅವರು ಹಣವನ್ನು ಬಳಸಿಕೊಂಡು ಯಾವ ಕೆಲಸಗಳನ್ನು ಮಾಡಿಸಿದ್ದಾರೆ ಎಂಬ ಮಾಹಿತಿಯನ್ನು ಒದಗಿಸುವಂತೆ ಶಾಸಕರು ಸಭೆಯಲ್ಲಿ ಕೇಳಿದರು.

ಕಳೆದ ವರ್ಷ ಈ ಯೋಜನೆಯಡಿ 26 ಲಕ್ಷ ರೂಪಾಯಿ ಬಂದಿದ್ದು, ಬಹುತೇಕ ಕೆಲಸ ಮುಗಿದೆ. 18 ಬಗೆಯ ಕೆಲಸಗಳಿಗೆ ಈ ಹಣವನ್ನು ವಿನಿಯೋಗಿಸಲಾಗಿದೆ. ಫಲಾನುಭವಿಗಳು ಮತ್ತು ಅವರು ಮಾಡಿಸಿಕೊಂಡಿರುವ ಕೆಲಸಗಳ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ನೀಡುವುದಾಗಿ ಕೃಷಿ ಅಧಿಕಾರಿ ರಾಮ್‌ಪ್ರಸಾದ್ ಉತ್ತರಿಸಿದರು.

ಯೂರಿಯಾ ಕೊರತೆ: ತಾಲ್ಲೂಕಿನಲ್ಲಿ ಶೇ 93ರಷ್ಟು ಬಿತ್ತನೆ ಕೆಲಸ ಆಗ್ದ್ದಿದು, ಒಟ್ಟು 300 ಟನ್ ಯೂರಿಯಾ ಗೊಬ್ಬರದ ಬೇಡಿಕೆಯಿದೆ. ಆದರೆ ತಾಲ್ಲೂಕಿನಲ್ಲಿ ಇದರ ದಾಸ್ತಾನು ಇಲ್ಲ ಎಂದು ಕೃಷಿ ಅಧಿಕಾರಿ ಪ್ರತಿಕ್ರಿಯಿಸಿದರು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರು ಇದೇ ಸಂದರ್ಭದಲ್ಲಿ ಸೂಚಿಸಿದರು.

ಕೃಷಿ ಇಲಾಖೆಯ ಸಾವಯವ ಕಾರ್ಯಕ್ರಮವನ್ನು ಮೂರು ವರ್ಷದಿಂದ ದೊಡ್ಡಗಂಗನವಾಡಿ ಗ್ರಾಮದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ವರ್ಷ ನಾಲ್ಕು ಲಕ್ಷ ರೂಪಾಯಿ ಖರ್ಚಾಗುತ್ತಿದ್ದು, ಮುಂದಿನ ವರ್ಷ ಕೈಲಾಂಚದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ರಾಮ್‌ಪ್ರಸಾದ್ ಸಭೆಗೆ ತಿಳಿಸಿದರು.

ಹಾಸ್ಟೆಲ್‌ಗಳು ಫೇಲಾಗಿವೆ:  ಸಮಾಜ ಕಲ್ಯಾಣ ಇಲಾಖೆಯಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಇಲ್ಲಿ ಶೇ 30ರಷ್ಟು ಮಾತ್ರ ಸರಿಯಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಉತ್ತರಿಸಿದಾಗ ಶಾಸಕ ರಾಜು ಅವರು ಪ್ರತಿಕ್ರಿಯಿಸಿ, `ಶೇ 30ಕ್ಕಿಂತ ಕಡಿಮೆ ಅಂಕಗಳು ಬಂದರೆ ಫೇಲಾಗಿವೆ ಎಂದರ್ಥ ಅಲ್ಲವೇ~ ಎಂದರು.

ಹಾಸ್ಟೆಲ್‌ಗಳಲ್ಲಿನ ವ್ಯವಸ್ಥೆ ಶೇ 70ರಷ್ಟು ಸರಿಯಾಗಿಲ್ಲ ಎಂದರೆ ಬೇಸರವಾಗುತ್ತದೆ. ಅಲ್ಲಿ ಅಕ್ರಮ, ಮೋಸ, ವಂಚನೆ ಅನ್ಯಾಯ ಆಗುತ್ತಿದೆ ಎಂದು ಅವರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿಯೇ ಇದ್ದೂ ಊಟ ಮಾಡಿ ಸಂಬಂಧಿಸಿದ ಅಧಿಕಾರಿಗಳು `ರಿಮಾರ್ಕ್ಸ್~ ಬರೆಯಬೇಕು ಎಂದು ಸೂಚಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.