ADVERTISEMENT

ರಂಗನತಿಟ್ಟು | ಹೊಸ ವಿನ್ಯಾಸ, ವರ್ಷವಿಡೀ ಬೋಟಿಂಗ್‌ ಸಂತಸ

ಪಕ್ಷಿಧಾಮಕ್ಕೆ ಸಮತಟ್ಟಾದ ತಳ ಹೊಂದಿರುವ ಐದು ದೋಣಿಗಳು

ಎಂ.ಎನ್.ಯೋಗೇಶ್‌
Published 12 ಜೂನ್ 2019, 19:30 IST
Last Updated 12 ಜೂನ್ 2019, 19:30 IST
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪರೀಕ್ಷಾ ವಿಹಾರ
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪರೀಕ್ಷಾ ವಿಹಾರ   

ಮಂಡ್ಯ: ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಇನ್ನುಮುಂದೆ ವರ್ಷಪೂರ್ತಿ ಬೋಟಿಂಗ್‌ ಅನುಭವ ದೊರೆಯಲಿದೆ. ನದಿಯಲ್ಲಿ ಮಂಡಿಯುದ್ದ ನೀರಿದ್ದರೂ ನಡೆಯುವ ಸಮತಟ್ಟಾದ ತಳ (ಫ್ಲ್ಯಾಟ್‌ ಬಾಟಮ್ಡ್‌) ಹೊಂದಿರುವ ಹೊಸ ವಿನ್ಯಾಸದ ದೋಣಿಗಳು ಕಾವೇರಿ ನದಿ ನೀರಿಗೆ ಇಳಿಯಲಿವೆ.

18 ಜನರು ಕೂರಬಹುದಾದ ಹೊಸ ಮಾದರಿಯ ದೋಣಿಯೊಂದು ಈಗಾಗಲೇ ಕಳೆದೊಂದು ವಾರದಿಂದ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದೆ. ಇಂತಹ ಇನ್ನೂ ನಾಲ್ಕು ದೋಣಿಗಳು ಪಕ್ಷಿಧಾಮಕ್ಕೆ ಶೀಘ್ರ ಬರಲಿವೆ. ಬೇಸಿಗೆ ವೇಳೆ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ಬೋಟಿಂಗ್‌ ಸ್ಥಗಿತಗೊಳ್ಳುತ್ತಿತ್ತು. ದೋಣಿಯಲ್ಲಿ ಸಾಗುತ್ತಾ ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರು ಬೇಸರ ಮಾಡಿಕೊಳ್ಳುತ್ತಿದ್ದರು. ಕಲ್ಲುಗಳ ಮೇಲೆ ನಿದ್ದೆ ಮಾಡುತ್ತಿದ್ದ ಮೊಸಳೆಗಳನ್ನು ವೀಕ್ಷಿಸುವ ಅನುಭವ ತಪ್ಪಿ ಹೋಗುತ್ತಿತ್ತು.

ಪ್ರವಾಸಿಗರಿಗೆ ವರ್ಷದ 365 ದಿನಗಳೂ ಬೋಟಿಂಗ್‌ ಅನುಭವ ನೀಡುವ ಉದ್ದೇಶದಿಂದ ಎರಡು ಅಡಿ ನೀರಿನಲ್ಲೂ ನಡೆಯುವ ದೋಣಿ ಅಭಿವೃದ್ಧಿಗೊಳಿಸಲಾಗಿದೆ. ಬೆಂಗಳೂರಿನ ಕರ್ನಾಟಕ ದೋಣಿ ಕೇಂದ್ರ ಐದು ಹೊಸ ದೋಣಿಗಳನ್ನು ರಂಗನತಿಟ್ಟು ಪಕ್ಷಿಧಾಮಕ್ಕೆ ನೀಡುತ್ತಿದೆ. ಪಕ್ಷಿಧಾಮದಲ್ಲಿ ಈಗಾಗಲೇ 17 ದೋಣಿಗಳಿವೆ. ಅವುಗಳು ತ್ರಿಕೋನಾಕೃತಿಯಲ್ಲಿದ್ದು ಚೂಪಾದ ತಳ (ಕೆನೋಯ್‌ ಮಾದರಿ) ಹೊಂದಿವೆ. ನೀರು ಕಡಿಮೆಯಾದ ಸಂದರ್ಭದಲ್ಲಿ ದೋಣಿಯ ತಳಭಾಗ ನೆಲ, ಕಲ್ಲುಗಳನ್ನು ಸ್ಪರ್ಶಿಸುತ್ತದೆ. ಇದರಿಂದ ದೋಣಿಗೆ ಹಾನಿಯಾಗುತ್ತದೆ. ಪ್ರವಾಸಿಗರಿಗೂ ಕಿರಿಕಿರಿ ಉಂಟಾಗುತ್ತದೆ. ಇದನ್ನು ತಪ್ಪಿಸಲು ಎರಡು ಅಡಿ ನೀರಿನಲ್ಲೂ ನಡೆಯುವ ದೋಣಿ ಅಭಿವೃದ್ಧಿಗೊಳಿಸಲಾಗಿದೆ.

ADVERTISEMENT

ಹೊಸದಾಗಿ ಬಂದಿರುವ ದೋಣಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪೂಜೆ ಸಲ್ಲಿಸಿ ನೀರಿಗೆ ಇಳಿಸಿದ್ದಾರೆ. ಮುಂದಿನ ವಾರ ಇನ್ನೂ ನಾಲ್ಕು ದೋಣಿಗಳು ಬರಲಿವೆ. ಬೇಸಿಗೆ ಬಂದರೂ ಹೊಸ ವಿನ್ಯಾಸದ ದೋಣಿಗಳಿಂದ ಎಂದಿನಂತೆ ಬೋಟಿಂಗ್‌ ನಡೆಯಲಿದೆ. ಆದರೆ ಪ್ರವಾಹ ಬಂದರೆ ಮಾತ್ರ ಬೋಟಿಂಗ್‌ ಸ್ಥಗಿತಗೊಳ್ಳಲಿದೆ.

‘ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ಗೆ ಅಪಾರ ಬೇಡಿಕೆ ಇದೆ. ಬೇಸಿಗೆ ತೀವ್ರಗೊಂಡಾಗ ಕಾವೇರಿ ನೀರಿನಲ್ಲಿ ನೀರಿನ ಹರಿವು ನೆಲ ಮುಟ್ಟುತ್ತದೆ. ಇಂತಹ ಸಂದರ್ಭದಲ್ಲಿ ದೋಣಿ ವಿಹಾರವನ್ನು ನಿಲ್ಲಿಸಬೇಕಾಗುತ್ತದೆ. ಎರಡು ಅಡಿ ನೀರಿನಲ್ಲೂ ಓಡುವ ಸಮತಟ್ಟಾಗಿರುವ ದೋಣಿಗಳಿಗೆ ಕಳೆದ ವರ್ಷವೇ ಪ್ರಸ್ತಾವ ಮಾಡಲಾಗಿತ್ತು. ಈಗ ಐದು ದೋಣಿಗಳು ನಮಗೆ ಸಿಗಲಿವೆ. ಇದರಿಂದ ನೀರು ಎಷ್ಟೇ ಕಡಿಮೆಯಾದರೂ ದೋಣಿ ವಿಹಾರಕ್ಕೆ ತೊಂದರೆ ಆಗುವುದಿಲ್ಲ’ ಎಂದು ಅರಣ್ಯ ಇಲಾಖೆ ವಿಭಾಗೀಯ ಅರಣ್ಯಾಧಿಕಾರಿ ಡಾ.ಪ್ರಶಾಂತ್‌ ಕುಮಾರ್‌ ಹೇಳಿದರು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಮಳೆಗಾಲ ಆರಂಭಗೊಂಡಿದ್ದು ರಂಗನತಿಟ್ಟು ಪಕ್ಷಿಧಾಮ ಹಸಿರು ಕವಚದಿಂದ ಕಂಗೊಳಿಸುತ್ತಿದೆ. ದೇಶ, ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇತ್ತೀಚೆಗಷ್ಟೇ ಹಕ್ಕಿ ಗಣತಿ ಪೂರ್ಣಗೊಂಡಿದ್ದು 65 ಜಾತಿಯ 3 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಗುರುತಿಸಲಾಗಿದೆ. ದೇಶ, ವಿದೇಶಗಳಿಂದ ಬರುವ ಪ್ರವಾಸಿಗರು ಪಕ್ಷಿಧಾಮದ ಆವರಣದಲ್ಲಿರುವ ಹಸಿರು ವಾತಾವರಣವನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ದ್ವೀಪಗಳ ಸುತ್ತಲೂ ದೋಣಿ ವಿಹಾರದಲ್ಲಿ ತೆರಳಿ ಪಕ್ಷಿಗಳ ಕಲರವ ಅನುಭವಿಸುತ್ತಿದ್ದಾರೆ.

‘ರಂಗನತಿಟ್ಟು ಪಕ್ಷಿಧಾಮ ಎಂದೊಡನೆ ನಮ್ಮ ಕಣ್ಣಿನ ಮುಂದೆ ಬರುವುದೇ ಬೋಟಿಂಗ್‌. ಇಲ್ಲಿ ಸಿಗುವ ದೋಣಿ ವಿಹಾರದ ಅನುಭವ ಮತ್ತೆಲ್ಲೂ ಸಿಗುವುದಿಲ್ಲ. ಹೊಸ ವಿನ್ಯಾಸದ ದೋಣಿಗಳ ಬಗ್ಗೆ ಖುಷಿಯಾಯಿತು’ ಎಂದು ಬೆಂಗಳೂರಿನ ಪ್ರವಾಸಿಗ ಮಲ್ಲಿಕಾರ್ಜುನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.