ಕೊಪ್ಪಳ: ನಗರದ ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜನಪರ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ನಗರದ ರೈಲು ನಿಲ್ದಾಣದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನಂತರ ನಿಲ್ದಾಣದ ವ್ಯವಸ್ಥಾಪಕ ಪಿ.ಟಿ. ನಾಯಕ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಎಸ್.ಎ.ಗಫಾರ್ ಮಾತನಾಡಿ, ನಗರವು ಜಿಲ್ಲಾ ಕೇಂದ್ರವಾಗಿ 14 ವರ್ಷಗಳು ಕಳೆದರೂ ರೈಲು ನಿಲ್ದಾಣ ಮಾತ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ರೈಲಿನಲ್ಲಿ ಸಂಚರಿಸುವ ಜನರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ, ಜನರ ಅನುಕೂಲಕ್ಕಾಗಿ ಕನಿಷ್ಠ ಸೌಲಭ್ಯಗಳು ಇಲ್ಲ ಎಂದು ದೂರಿದರು.
ನಗರದ ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಿಸಬೇಕು, ಪಾದಚಾರಿಗಳಿಗಾಗಿ ಮೇಲ್ಸೇತುವೆ, ಕುಡಿಯುವ ಸಿಹಿ ನೀರು ವ್ಯವಸ್ಥೆ, ಪಾರ್ಕಿಂಗ್ ಸ್ಥಳ ವಿಸ್ತರಿಸುವುದು, ವಿಶ್ರಾಂತಿ ಗೃಹ, ಡಿಜಿಟಲ್ ಕೋಚ್‌ಗೆ ವ್ಯವಸ್ಥೆ, ನಿಲ್ದಾಣದ ಮುಂದೆ ಸ್ವಾಗತ ಕಮಾನು ಫಲಕ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಸಿ.ಪಿ.ಐ. ರಾಜ್ಯ ಸಹ ಕಾರ್ಯದರ್ಶಿ ಶೌಕತ್ ಅಲಿ ಆಲೂರ, ಎ.ಐ.ಟಿ.ಯು.ಸಿ. ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಡಾ.ಕೆ.ಎಸ್.ಜನಾರ್ದನ, ಮುಮ್ತಾಜ್, ಸುಮಿತ್ರಾ, ವಿಜಯಲಕ್ಷ್ಮೀ, ಶೈಲಾ ಶಶಿಮಠ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.