ADVERTISEMENT

ಲಕ್ಕುಂಡಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಲಕ್ಕುಂಡಿ (ಗದಗ): ರಾಜ್ಯ ಸರ್ಕಾರ ಕೊಡಮಾಡುವ ‘ಕುಮಾರವಾಸ್ಯ ಪ್ರಶಸ್ತಿ’ಯನ್ನು ಬೆಳಗಾವಿಯಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ಲಕ್ಕುಂಡಿಯಲ್ಲಿ ಭಾನುವಾರ ‘ಲಕ್ಕುಂಡಿ ಉತ್ಸವ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮೊದಲು ನಿಗದಿಯಾದಂತೆ ಲಕ್ಕುಂಡಿ ಉತ್ಸವದಲ್ಲಿಯೇ ಎಚ್.ಆರ್. ಕೇಶವಮೂರ್ತಿ ಅವರಿಗೆ ಕುಮಾರವ್ಯಾಸ ಪ್ರಶಸ್ತಿಯನ್ನುನೀಡಿ ಗೌರವಿಸಬೇಕಾಗಿತ್ತು. ಆದರೆ ಮುಂಬರುವ ಕೆಲವೇ ದಿನದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವಿರುವುದರಿಂದ, ಅಂತಹ ವಿಶ್ವ ಮಟ್ಟದ ಕಾರ್ಯಕ್ರಮದಲ್ಲಿ ಇಂತಹ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಿ.ಸಿ.ಪಾಟೀಲ ಸ್ಪಷ್ಟಪಡಿಸಿದರು.

‘ಲಕ್ಕುಂಡಿ ಉತ್ಸವ’ ಜನೋತ್ಸವವಾಗಿ ರೂಪುಗೊಂಡಿದೆ. ಮಂದಿನ ವರ್ಷದಿಂದ ಈ ಉತ್ಸವಕ್ಕೆ 50 ಲಕ್ಷ ರೂ ಅನುದಾನ ನೀಡುವುದಾಗಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ. ಅಲ್ಲದೆ ಲಕ್ಕುಂಡಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ನೀಡಲು ಸಹ ಸಚಿವರು ಸಮ್ಮತಿಸಿದ್ದಾರೆ ಎಂದು ಸಭೆಯಲ್ಲಿ ಪ್ರಕಟಿಸಿದರು.
‘ಲಕ್ಕುಂಡಿ ಉತ್ಸವ’ ನಿರಂತರವಾಗಿ ಪ್ರತಿ ವರ್ಷ ನಡೆಯುವಂತೆ ಆಗಲು ನಿಗದಿತ ತಿಂಗಳನ್ನು ನಿರ್ಧಾರ ಮಾಡಬೇಕು. ಅದಕ್ಕೆ ಅನುದಾನ ನೀಡಲು ಕಾಯ್ದೆಯೊಂದನ್ನು ರೂಪಿಸಬೇಕು ಎಂದು ಸಚಿವರು ಒತ್ತಾಯಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತ ಖಾತೆ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು. ಸಚಿವ ಜಗದೀಶ ಶೆಟ್ಟರ್ ದೋಣಿ ವಿಹಾರಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.