ADVERTISEMENT

ಲೋಕಾಯುಕ್ತ ಬಲೆಗೆ ಸರ್ವೇಯರ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 9:35 IST
Last Updated 21 ಡಿಸೆಂಬರ್ 2010, 9:35 IST

ವಾರಪೇಟೆ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವಲ್ಲಿ ಮಗ್ನರಾಗಿದ್ದರೆ, ಅತ್ತ ಲಂಚ ಪಡೆಯುತ್ತಿದ್ದ ಸರ್ವೇಯರ್ ಒಬ್ಬರು ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲ್ಲೂಕು ಭೂಮಾಪನ ಇಲಾಖೆಯ ಪರವಾನಗಿ ಭೂ ಮಾಪಕ ಲಕ್ಷ್ಮಣ್ ರೈತರೊಬ್ಬರಿಂದ ಕಡತ ವಿಲೇವಾರಿಗೆ ರೂ. 5 ಸಾವಿರ ಲಂಚ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣ ಸಮೇತ ಬಂಧಿಸಿದ್ದಾರೆ.

ಇಲ್ಲಿಗೆ ಸಮೀಪದ ಆದಿಗಳಲೆ ಗ್ರಾಮದ ನಿವಾಸಿ ಎಚ್.ಎಸ್. ಹರೀಶ್ಚಂದ್ರ ಭೂಮಾಪನ ಇಲಾಖೆ ಯಿಂದ ಸರ್ವೆ ನಂ 2, 17, 5 ರಲ್ಲಿರುವ ಜಾಗವನ್ನು ಸರ್ವೆ ಮಾಡಿಸಿ ಆಸ್ತಿಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಭಾಗಕ್ಕೂ ನಿಗದಿತ ಶುಲ್ಕ ರೂ. 1800 ಪಾವತಿಸಿದ್ದರು. ಈ ಸಂಬಂಧ ದಾಖಲೆಯನ್ನು ಸಂಬಂಧಪಟ್ಟವರಿಗೆ ನೀಡಲು ಸರ್ವೇಯರ್ ಲಕ್ಷ್ಮಣ್ ಒಟ್ಟು  ರೂ. 10,500 ಬೇಡಿಕೆಯಿಟ್ಟಿದ್ದರು. ಚೌಕಾಸಿಯ ನಂತರ 6 ಸಾವಿರ ರೂಪಾಯಿ ಸ್ವೀಕರಿಸಲು ಒಪ್ಪಿಗೆ ನೀಡಿದ್ದರು. ಈ ಬಗ್ಗೆ ಹರೀಶ್ಚಂದ್ರ ಡಿ.16ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಸೋಮವಾರ ಮೈಸೂರು ಲೋಕಾಯುಕ್ತ ವಿಭಾಗದ ಎಸ್.ಪಿ. ಡಿಸೋಜ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ಡಿವೈಎಸ್‌ಪಿ ಸಿ.ಕೆ.ಶಶಿ ಧರ್, ಇನ್ಸ್‌ಪೆಕ್ಟರ್ ಗಂಗಾಧರಪ್ಪ, ಮೈಸೂರು ಲೋಕಾಯುಕ್ತ ಆಧಿಕಾರಿಗಳಾದ ಪುಟ್ಟಣ್ಣ, ಮಹೇಶ್, ಸಿಬ್ಬಂದಿ ಕುಸುಮಾಧರ ಗೌಡ, ತಿರುಮಲೇಶ್, ಸೋಮಯ್ಯ, ಲೋಕೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.