ADVERTISEMENT

ವಧು ಪರೀಕ್ಷೆಗೆ ತೆರಳುತ್ತಿದ್ದ 7 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಪಾಂಡವಪುರ: ವಧು ಪರೀಕ್ಷೆಗಾಗಿ ತೆರಳುತ್ತಿದ್ದ ಏಳು ಜನರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಮೈಸೂರು-ಕೆ.ಆರ್.ಪೇಟೆ ರಸ್ತೆಯ ತಾಲೂಕಿನ ಹುಲ್ಕೆರೆ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದ ತಾಂಡವಯ್ಯ (50), ಕೃಷ್ಣಮೂರ್ತಿ (30), ಕುರಿಕೊಪ್ಪಲು ಗ್ರಾಮದ ಸಿದ್ದರಾಜು (40), ಹೊಸ ಬೂದನೂರು ಗ್ರಾಮದ ರವಳಯ್ಯ (60), ಯರಹಳ್ಳಿ ಗ್ರಾಮದ ಬೋರಯ್ಯ (60), ಗೋಪಾಲಪುರ ಗ್ರಾಮದ ಬಾಲಕೃಷ್ಣ (30) ಮತ್ತು ಪಾಂಡವಪುರ ರೈಲ್ವೆ ನಿಲ್ದಾಣದ ರಾಜಣ್ಣ (50) ಮೃತರಾದ ನತದೃಷ್ಟರು.

ಸೋಮವಾರ ಬೆಳಿಗ್ಗೆ ಹೊಳಲು ಗ್ರಾಮದಿಂದ ಪಾಂಡವಪುರ ಮಾರ್ಗವಾಗಿ ಕೆ.ಆರ್.ಪೇಟೆ ತಾಲೂಕಿನ ಸಾಗರಕಟ್ಟೆ ಗ್ರಾಮದಲ್ಲಿ ಹೆಣ್ಣು ನೋಡಲು ಇವರು ಮಾರುತಿ ವ್ಯಾನ್‌ನಲ್ಲಿ ತೆರಳುತ್ತಿದ್ದರು. ಹುಲ್ಕೆರೆ ಗ್ರಾಮದ ಬಳಿ ಮುಂದೆ ಚಲಿಸುತ್ತಿದ್ದ ಆಟೊ ರಿಕ್ಷಾ ಹಿಂದಿಕ್ಕುವ ಯತ್ನದಲ್ಲಿ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ ತೀವ್ರವಾಗಿ ಗಾಯಗೊಂಡಿದ್ದ ರವಳಯ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. ತಾಂಡವಯ್ಯ ತಮ್ಮ ಮಗ ಕೃಷ್ಣಮೂರ್ತಿಗೆ  ಹೆಣ್ಣು ನೋಡಲು  ತಮ್ಮ ಅಳಿಯ ಸಿದ್ದರಾಜು ಹಾಗೂ ಬಂಧುಗಳೊಂದಿಗೆ ಹೊರಟಿದ್ದರು.

ಅಪಘಾತ ಸಂಭವಿಸಿದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ಭೀಕರತೆಗೆ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದೇಹಗಳನ್ನು ವ್ಯಾನ್‌ನಿಂದ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಪರಿಹಾರ: ಮೃತರ ಕುಟುಂಬಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತಲಾ 50 ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ಘೋಷಿಸಿದ್ದು, ಮೈಸೂರು ವಿಭಾಗೀಯ ನಿಯಂತ್ರಾಧಿಕಾರಿ ರೇಣುಕೇಶ್ವರ್ ಪರಿಹಾರ ವಿತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.