ADVERTISEMENT

ವಿಜ್ಞಾನ ಆಧರಿತ ಬೋಧನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 8:40 IST
Last Updated 16 ಫೆಬ್ರುವರಿ 2011, 8:40 IST

ಬಸವಾಪಟ್ಟಣ: ಮಕ್ಕಳಿಗೆ ಪಾಠಗಳನ್ನು ವೈಜ್ಞಾನಿಕ ತಂತ್ರಜ್ಞಾನ ಮೂಲಕ ಬೋಧಿಸಿದಾಗ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂದು ತಾ.ಪಂ. ಮಾಜಿ ಸದಸ್ಯ ಸತೀಶ್ ಪಟೇಲ್ ನುಡಿದರು. ಅವರು ಇಲ್ಲಿಗೆ ಸಮೀಪದ ಹರಲೀಪುರದ ನೀಲಮ್ಮ ಪಟೇಲ್ ಬಸಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿರುವ ಕಂಪ್ಯೂಟರೀಕರಣದ ಸ್ಮಾರ್ಟ್‌ಕ್ಲಾಸ್ ತಂತ್ರಜ್ಞಾನವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಾಂಪ್ರದಾಯಕ ಶಿಕ್ಷಣ ಪದ್ಧತಿ ಬದಲಾಗಬೇಕಿದೆ. ಅನಾವಶ್ಯಕ ಪಠ್ಯಕ್ರಮಗಳ ಬದಲಾಗಿ ಪಾಶ್ಚಾತ್ಯ ಮಾದರಿಯ ಶಿಕ್ಷಣವನ್ನು ಇಂದಿನ ಮಕ್ಕಳಿಗೆ ನೀಡಬೇಕಿದೆ. ಈಗಾಗಲೇ ಶಾಲೆಗಳಲ್ಲಿ ಕಂಪ್ಯೂಟರ್‌ಗಳ ಮೂಲಕ ಶಿಕ್ಷಣ ನೀಡಲು ಆರಂಭಿಸಿದ್ದರೂ ಪಾಠಗಳು ಸಾಂಪ್ರದಾಯಿಕ ಮಾದರಿಯಲ್ಲಿವೆ. ಇಂದಿನ ಕಾಲದ ಆವಶ್ಯಕತೆಗಳಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು ಎಂದರು.

ಗ್ರಾ.ಪಂ. ಸದಸ್ಯ ಎನ್. ಗಂಗಾಧರಪ್ಪ ಮಾತನಾಡಿ, ಹರಲೀಪುರದಂತಹ ಗ್ರಾಮಾಂತರ ಪ್ರದೇಶದ ಈ ಖಾಸಗಿಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಮಾದರಿಯ ಪಾಠ ಬೋಧನೆ ಇಡೀರಾಜ್ಯದಲ್ಲಿ ಮೊದಲು ಎನಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಸಾನಂದಮೂರ್ತಿ ಮಾತನಾಡಿ, ಸ್ಮಾರ್ಟ್‌ಕ್ಲಾಸ್ ಯೋಜನೆ `  40ಲಕ್ಷ ಮೊತ್ತದ ಯೋಜನೆ ಆಗಿದ್ದು, ಮಕ್ಕಳಿಗೆ ಪಾಠಗಳ ಸ್ಪಷ್ಟ ಅರಿವಿಗಾಗಿ ಇದನ್ನು ಅಳವಡಿಸಲಾಗಿದೆ ಎಂದರು.ಕುಂಬಳೂರು ಆಂಜನೇಯಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಧಾಕರ್, ಪ್ರಭುದೇವಯ್ಯ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ. ಮುರಳೀಧರ ಸ್ವಾಗತಿಸಿದರು. ಶಿಕ್ಷಕಿ ವಸಂತಕುಮಾರಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.