ADVERTISEMENT

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಮಂಡ್ಯ: ಮುಂಗಾರು ಹಂಗಾಮಿನಲ್ಲಿ ಬರಪೀಡಿತ ಎಂದು ಘೋಷಿತವಾಗಿದ್ದ ಜಿಲ್ಲೆಯಲ್ಲಿ ಕೃಷಿ ಸೇರಿ ವಿವಿಧ ಮೂಲ ಸೌಕರ್ಯಗಳು, ಯೋಜನೆಗಳ ಜಾರಿ ಸಂಬಂಧ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಶುಕ್ರವಾರ ಜಿಲ್ಲಾಧಿಕಾರಿಗಳಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದರು.

ಪ್ರಸ್ತುತ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ರಸ್ತೆಗಳ ದುರಸ್ತಿ ಕಾರ್ಯಕ್ಕೆ ಅನುದಾನ ಬಂದಿದ್ದು, ಕಾಮಗಾರಿ ಜಾರಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದಿಷ್ಟು ಮಳೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಪಿ.ಸಿ. ಜಾಫರ್ ಮಾಹಿತಿ ನೀಡಿದರು ಎಂದು ಗೊತ್ತಾಗಿದೆ.

ಮಂಡ್ಯ ಸೇರಿದಂತೆ ಏಕ ಕಾಲದಲ್ಲಿ ವಿವಿಧ ಜಿಲ್ಲೆಗಳ ಅಧಿಕಾರಿಗಳ ಜತೆ ಶುಕ್ರವಾರ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸಿಎಂ ಜತೆಗೆ ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್, ಮುಖ್ಯ ಕಾರ್ಯದರ್ಶಿ ರಂಗನಾಥ್ ಇದ್ದರು. ಲಭ್ಯ ಮಾಹಿತಿಗಳ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಒಟ್ಟು 10,982 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಸುಮಾರು ಶೇ 50 ಬೆಳೆ ನಷ್ಟವಾಗಿದೆ ಎಂದು ಎಂಬ ಅಂಶವನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
 
ಇದರ ಜತೆಗೆ, ಆರೋಗ್ಯ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಜಯರಾಂ, ಹೆಚ್ಚುವರಿ ಜಿಲ್ಲಾಧಿಕಾರಿ ಜಯಣ್ಣ ಮತ್ತು ವಿವಿಧ ಇಲಾಖೆಗಳ ಅಧಿ ಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.