ಗುಲ್ಬರ್ಗ: ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಬೇರೆ ಬೇರೆ ದರ ನಿಗದಿ ಮಾಡುವುದು ಅಸಾಧ್ಯ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಇಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ಅಹವಾಲು ವಿಚಾರಣೆ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿ, ಸದ್ಯಕ್ಕಂತೂ ರಾಜ್ಯದಲ್ಲಿ ಎಸ್ಕಾಂಗಳಿಗೆ ಬಹುರೂಪ ದರ ನಿಗದಿ ಮಾಡಲು ಸಾಧ್ಯವಿಲ್ಲ. ವಿದ್ಯುತ್ ದರ ನಿಗದಿಗೆ ರೂಪಿಸಲಾದ ರಾಷ್ಟ್ರೀಯ ನೀತಿ ಇದಕ್ಕೆ ಅವಕಾಶ ಕೊಟ್ಟಿಲ್ಲ ಎಂದರು. ಗುಲ್ಬರ್ಗದಲ್ಲಿ ಒಂದು ದರ; ಸಿಂದಗಿ (ವಿಜಾಪುರ ಜಿಲ್ಲೆ) ಪಟ್ಟಣದ ಗ್ರಾಹಕರಿಗೆ ಇನ್ನೊಂದು ದರ ಇದ್ದರೆ ಹೇಗಾದೀತು? ಎಂದು ಅವರು ಪ್ರಶ್ನಿಸಿದರು.
ಮಂಗಳೂರಿಗೆ ಹೋಲಿಸಿದರೆ ಸಾಗಣೆ ಹಾಗೂ ವಿತರಣೆ ನಷ್ಟವು ಗುಲ್ಬರ್ಗದಲ್ಲಿ ಹೆಚ್ಚಿದೆ. ಹಾಗಿದ್ದರೂ ಎರಡೂ ಎಸ್ಕಾಂಗಳ ಗ್ರಾಹಕರಿಗೂ ಏಕರೂಪದ ದರ ವಿಧಿಸಬೇಕು. ಇದಕ್ಕೆ ಪರ್ಯಾಯವಿಲ್ಲ ಎಂದರು.
ಇಂಧನದ ಬೆಲೆ ಹೆಚ್ಚಾದಾಗ ವಿದ್ಯುತ್ ದರದಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಮಾಡಲು ಎಲ್ಲ ಎಸ್ಕಾಂಗಳಿಗೆ ಅನುಮತಿ ನೀಡುವ ಸಾಧ್ಯತೆಯ ಬಗ್ಗೆ ಅವರು ಸುಳಿವು ನೀಡಿದರು.
ಮೇಲ್ಮನವಿ ಪ್ರಾಧಿಕಾರವು `ಇಂಧನ ಹೊಂದಾಣಿಕೆ ಶುಲ್ಕ~ದ ಅಡಿಯಲ್ಲಿ ಎಸ್ಕಾಂಗಳು ದರದಲ್ಲಿ ಅಲ್ಪ ಏರಿಕೆ ಮಾಡಲು ಅವಕಾಶ ಕಲ್ಪಿಸಿದೆ. ಇದನ್ನು ಜಾರಿಗೊಳಿಸಲು ಅನುಮತಿ ನೀಡುವಂತೆ ಮೊಟ್ಟ ಮೊದಲ ಬಾರಿಗೆ ಜೆಸ್ಕಾಂ ಮನವಿ ಮಾಡಿದೆ. ಈ ಕುರಿತು ಗಮನ ಹರಿಸುವುದಾಗಿ ಹೇಳಿದರು.
ಏ. 11ರಂದು ಬೆಸ್ಕಾಂ ಹಾಗೂ 13ರಂದು ಕೆಪಿಟಿಸಿಎಲ್ ಅಹವಾಲು ಸ್ವೀಕರಿಸಿದ ಬಳಿಕ ಮೂರು ವಾರಗಳಲ್ಲಿ ವರದಿ ನೀಡಲಾಗುವುದು ಎಂದು ಶ್ರೀನಿವಾಸಮೂರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.