ADVERTISEMENT

ವಿಧಾನಸಭೆ ವಿಸರ್ಜನೆಗೆ ಸಿಪಿಎಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST

ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವುದರಿಂದ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ನಡೆಸುವ ನೈತಿಕ ಹಕ್ಕು ಕಳೆದುಕೊಂಡಿದೆ. ಕೂಡಲೇ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು ಎಂದು ಸಿಪಿಎಂ ಶನಿವಾರ ಇಲ್ಲಿ ಒತ್ತಾಯಿಸಿದೆ.

 ಸ್ವತಂತ್ರ ಚೌಕದಲ್ಲಿ ಪ್ರತಿಭಟನೆ ನಡೆಸಿದ ಸಿಪಿಎಂ ಕಾರ್ಯಕರ್ತರು, ದೇಶಪ್ರೇಮವನ್ನು ಹುಟ್ಟಿನಿಂದಲೇ ಗಳಿಸಿದ್ದೇವೆಂದು ಬಿಜೆಪಿ ಮುಖಂಡರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಅಧಿಕಾರಾವಧಿಯಲ್ಲಿ ಸ್ವಜನ-ಪಕ್ಷಪಾತ, ಭ್ರಷ್ಟಾಚಾರ, ಡಿನೋಟಿಫಿಕೇಷನ್, ಅಕ್ರಮ ಗಣಿ ಲೂಟಿ, ರೈತರ ಭೂಮಿ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.

  ಕೇವಲ ಅಧಿಕಾರಕ್ಕಾಗಿ ಬಿಜೆಪಿ ನಾಯಕರು ಕಿತ್ತಾಟ, ಭಿನ್ನಮತ, ಗುಡಿಗುಂಡಾತರಗಳಿಗೆ ಸುತ್ತಾಟ, ರೆಸಾರ್ಟ್ ರಾಜಕಾರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿರುವುದನ್ನು ಜನರು ಕ್ಷಮಿಸಬಾರದೆಂದು ವಿನಂತಿಸಿದರು. ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಭ್ರಷ್ಟರನ್ನು ತನಿಖೆಗೆ ಒಳಪಡಿಸಬೇಕು. ಭ್ರಷ್ಟರಿಗೆ ಸರಿಯಾದ ಶಿಕ್ಷೆ ನೀಡಿ ಜನತೆಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್, ನಗರ ಕಾರ್ಯದರ್ಶಿ  ಎನ್.ಕೆ. ಸುಬ್ರಹ್ಮಣ್ಯ, ರೈತ ಸಂಘಟನೆ ಮುಖಂಡ ಬಿ.ಉಮೇಶ್, ಕಾರ್ಮಿಕ ಮುಖಂಡ ನೌಶಾದ್ ಸೆಹಗನ್, ಡಿವೈಎಫ್‌ಐನ ಎಸ್.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.