ADVERTISEMENT

ವಿಧಾನಸೌಧದಲ್ಲಿ ಅನ್ನದಾತ ಕಾರ್ಯಕ್ರಮ: ಸಿಎಂ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST
ವಿಧಾನಸೌಧದಲ್ಲಿ ಅನ್ನದಾತ ಕಾರ್ಯಕ್ರಮ: ಸಿಎಂ
ವಿಧಾನಸೌಧದಲ್ಲಿ ಅನ್ನದಾತ ಕಾರ್ಯಕ್ರಮ: ಸಿಎಂ   

ಕೊಪ್ಪಳ: ಅನ್ನದಾತನ ಅಂಗಳದಲ್ಲಿ  ಕಾರ್ಯಕ್ರಮದ ಮಾದರಿಯಲ್ಲಿ ವಿಧಾನಸೌಧದಲ್ಲಿ ಅನ್ನದಾತ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜ್ಯದ ಪ್ರಮುಖ ಸಾವಯವ ರೈತರನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೇರಿಸಿ ಸಂವಾದ ನಡೆಸಿ ಕೃಷಿ ಸಮಸ್ಯೆಗಳ ಬಗ್ಗೆ ಪರಿಹಾರ ರೂಪಿಸುವುದು ತಮ್ಮ ಉದ್ದೆೀಶವಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶನಿವಾರ ಹೇಳಿದರು.

ಅನ್ನದಾತನ ಅಂಗಳದಲ್ಲಿ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ಡೊಂಬರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾವಯವ ಕೃಷಿಕರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರೈತರ ನೆರವಿಗೆ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ರೈತರು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಬೇಕೇ ಹೊರತು ಆತ್ಮಹತ್ಯೆಗೆ ಶರಣಾಗಬಾರದು. ರೈತರ ಹಿತ ಕಾಯಲು ಸರ್ಕಾರ ಕಟಿಬದ್ಧವಾಗಿದೆ ಎಂದು ಹೇಳಿದರು.

ನಿಮ್ಮ ಮನೆ ಅಂಗಳಕ್ಕೆ ರೈತರನ್ನು ಕರೆಯಿಸಬೇಡವೆ ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸದಾನಂದಗೌಡ, ವಿಧಾನಸೌಧವೇ ನನ್ನ ಮನೆಯಂಗಳವಾಗಿದೆ, ವಿಧಾನಸೌಧ ಕೇವಲ ಶಾಸಕರು, ಸಚಿವರಿಗೆ ಮಾತ್ರ ಮೀಸಲಲ್ಲ ಎಂದರು.

ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯೊಂದಿಗೆ ಚರ್ಚಿಸಿದ ದೇಶಿ ಜಾನುವಾರು ಸಂಪತ್ತಿನ ವೃದ್ಧಿಗೆ ಪ್ರಯತ್ನಿಸುವುದು, ಸಾವಯವ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ದೊರಕಿಸಿಕೊಡಲು ವಿಶೇಷ ಮಾರುಕಟ್ಟೆ ವ್ಯವಸ್ಥೆ, ದೇಶಿ ತಳಿ ಬೀಜಗಳನ್ನು ಉಳಿಸುವುದಕ್ಕೆ ಸರ್ಕಾರ ಮುಂದಾಗಲಿದೆ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.