ADVERTISEMENT

ವಿಶ್ವ ಪರಂಪರೆ ಪಟ್ಟಿಗೆ ಬೇಲೂರು: ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಹಳೇಬೀಡು: `ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಯುನೆಸ್ಕೊಗೆ ಪ್ರಸ್ತಾವನೆ ಸಲ್ಲಿಸಿದೆ~ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಟಿ. ಶರವಣನ್ ತಿಳಿಸಿದರು.

ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿ ಬುಧವಾರ ನಡೆದ ವಿಶ್ವ ಪರಂಪರೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುನೆಸ್ಕೊ ತಂಡ ಈ ಮೂರು ತಾಣಗಳ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಯುನೆಸ್ಕೊ ಸಂಸ್ಥೆ ತಾಣಗಳನ್ನು ವಿಶ್ವಪರಂಪರೆ ಪಟ್ಟಿಗೆ ಒಳಪಡಿಸಿದರೆ, ಇಲ್ಲಿಯ ಸ್ಮಾರಕಗಳು ಮಾತ್ರವಲ್ಲದೆ ಊರುಗಳು ಸಹ ಅಭಿವೃದ್ಧಿ ಹೊಂದುತ್ತವೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸ್ಥಳೀಯ ಉದ್ಯಮಗಳು ಬೆಳೆಯುತ್ತವೆ ಎಂದರು.

ಪುರಾತತ್ವ ಅಧಿಕಾರಿ ಪಿ. ಅರವಳ್ಳಿ ಮಾತನಾಡಿ, ಕೇದಾರೇಶ್ವರ ದೇವಾಲಯ ಬಳಿ ಇರುವ ಖಾಸಗಿ ಜಮೀನಿನಲ್ಲಿ ಅಂತರರಾಷ್ಟ್ರೀಯ ಸಂಗ್ರಹಾಲಯ ನಿರ್ಮಿಸಲು ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ. ಸಂಗ್ರಹಾಲಯ ಮೇಲ್ದರ್ಜೆಗೆ ಪರಿವರ್ತನೆಯಾದರೆ ಹೊಯ್ಸಳೇಶ್ವರ, ಕೇದಾರೇಶ್ವರ ದೇವಾಲಯ, ಜೈನ ಬಸದಿಗಳು ಹಾಗೂ ಮ್ಯೂಸಿಯಂ ವೀಕ್ಷಣೆಗೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಪ್ರಾಚೀನ ಸ್ಮಾರಕಗಳ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅಗತ್ಯ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್. ಲಿಂಗಪ್ಪ ಪ್ರೇಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಾನವನ ಅಧಿಕಾರಿ ಪ್ರಭಾವತಿ ಹಾಗೂ ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.