ADVERTISEMENT

ವೇಗದ ಚಾಲನೆಯಿಂದ ಜೀವಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಕಡೂರು: ವೇಗದ ಉಮೇದಿನಲ್ಲಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಜೀವಕ್ಕೆ ಕುತ್ತು ಖಂಡಿತ. ಅಲ್ಲದೆ, ಇತರರ ಜೀವಕ್ಕೂ ಎರವಾಗುವ ಅಪಾಯವಿದೆ. ಬಹಳ ಜಾಗರೂಕತೆಯಿಂದ ವಾಹನ ಚಲಾಯಿಸಿ ಎಂದು ತರೀಕೆರೆ ಡಿವೈಎಸ್‌ಪಿ ಸದಾನಂದ ನಾಯ್ಕ ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹಕ್ಕೆ  ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಚಾಲನೆ ನೀಡಿದ ಅವರು, ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಅಪಘಾತ ಸಂಖ್ಯೆ ಹೆಚ್ಚುತ್ತಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಸಂಚಾರಿ ನಿಯಮ ಉಲ್ಲಂಘಿಸುವುದು, ಸಾಮರ್ಥ್ಯ-ನಿಯಮ ಮೀರಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರನ್ನು ವಾಹನಗಳಲ್ಲಿ ಕರೆದೊಯ್ಯುವುದು ತಪ್ಪಬೇಕು ಎಂದು ಎಚ್ಚರಿಸಿದರು.

ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಆಟೊದಲ್ಲಿ ಹೆಚ್ಚು ಮಕ್ಕಳನ್ನು ಕೂರಿಸಿಕೊಳ್ಳುವುದನ್ನೂ, ವೇಗವಾಗಿ ಚಾಲನೆ ಮಾಡುವುದನ್ನೂ ಚಾಲಕರು ಬಿಡಬೇಕು. ಅವಘಡ ಸಂಭವಿಸಿದರೆ ಮಕ್ಕಳ ಜೀವಕ್ಕೆ ಅಪಾಯ. ಆದಷ್ಟೂ ಕಡಿಮೆ ಮಕ್ಕಳನ್ನು ಕರೆದೊಯ್ಯಿರಿ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿರಿ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ರೋಟರಿ ಅಧ್ಯಕ್ಷ ತಿಮ್ಮಯ್ಯ, ಯಾರದೇ ಜೀವವಾದರೂ ಅದಕ್ಕೆ ಬೆಲೆ ಕಟ್ಟಲಾಗದು. ಅಪಘಾತಗಳಿಂದ ಪ್ರಾಣಹಾನಿ ಆದರೆ ಕುಟುಂಬದವರಿಗೆ ಆಗುವ ನೋವಿನ ಬಗ್ಗೆ ಚಿಂತಿಸಿ. ಪಾದಾಚಾರಿಗಳು, ಪ್ರಯಾಣಿಕರ ಸುರಕ್ಷತೆ ಬಗೆಗೂ ಗಮನಕೊಡಿ ಎಂದು ಮನವಿ ಮಾಡಿದರು.

ಪೊಲೀಸ್ ಅಧಿಕಾರಿ ಬಾಲಚಂದ್ರ ಗೌಡ ಮತ್ತು ರೇವಣ್ಣ ಸಪ್ತಾಹದ ಉದ್ದೇಶ ಮತ್ತು ಸಾರ್ವಜನಿಕರ ಸಹಕಾರ, ಪಾಲ್ಗೊಳ್ಳುವಿಕೆ ಕುರಿತು ಮಾತನಾಡಿದರು.

ಮಹಾವೀರ ಸುರಾನ, ಆಟೊ ಚಾಲಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.