ADVERTISEMENT

ಶಿವಾಜಿ ಜಯಂತಿ ರಾಷ್ಟ್ರೀಯ ಹಬ್ಬವಾಗಲಿ: ಸಂಸದರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ಶಿವಮೊಗ್ಗ: ಶಿವಾಜಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಮಾಡುವಂತೆ, ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಅನಿಲ್‌ಲಾಡ್ ಹೇಳಿದರು.

 ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಛತ್ರಪತಿ ಶಿವಾಜಿ ಮರಾಠ ಟ್ರಸ್ಟ್ ಸಂಯುಕ್ತವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬಾ ಭವಾನಿ ದೇವಸ್ಥಾನ, ಛತ್ರಪತಿ ಶಿವಾಜಿ ಸಮುದಾಯ ಭವನ, ಶಿವಾಜಿ ವಾಣಿಜ್ಯ ಸಂಕೀರ್ಣ ಹಾಗೂ ಮರಾಠ ಹಾಸ್ಟೆಲ್ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಅಧಿವೇಶನದಲ್ಲೇ ಈ ವಿಷಯ ಪ್ರಸ್ತಾಪಿಸಲಾಗುವುದು ಎಂದ ಅವರು, ತಾವು ಎಲ್ಲ ಪಕ್ಷದ ಜನಪ್ರತಿನಿಧಿಗಳ ಸಭೆ ಕರೆದು, ಎಲ್ಲರ ಬೆಂಬಲದೊಂದಿಗೆ ಕೇಂದ್ರ  ಮನವಿ ಸಲ್ಲಿಸಲಾಗುವುದು ಎಂದರು.
ಶಿವಾಜಿ ಜಯಂತಿಯನ್ನು ಸರ್ಕಾರಿ ದಿನಾಚರಣೆಯನ್ನಾಗಿ ಘೋಷಿಸಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಕ್ರಮವನ್ನು ಶ್ಲಾಘಿಸಿದರು.

 ಶಿವಾಜಿ ಜಯಂತಿ ಕೇವಲ ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಸೀಮಿತವಾಗಬಾರದು. ಈ ಜಯಂತ್ಯುತ್ಸವ ರಾಷ್ಟ್ರೀಯ ಹಬ್ಬವನ್ನಾಗಿ ಘೋಷಿಸಬೇಕು ಎಂದು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಆಗ್ರಹಿಸಿದರು.
ಪ್ರಸ್ತುತ ಭಾರತದ ಸ್ಥಿತಿ ಗಮನಿಸಿದರೆ, ಶಿವಾಜಿ ಮತ್ತೊಮ್ಮೆ ಹುಟ್ಟಿ ಬರಬೇಕು ಎನಿಸುತ್ತದೆ. ಭಾರತದ ಸುತ್ತಮುತ್ತಲಿನ ಕೆಲ ರಾಷ್ಟ್ರಗಳು, ದೇಶದ ವಿರುದ್ಧ ಕುತಂತ್ರ ನಡೆಸುತ್ತಿವೆ. ಆಂತರಿಕವಾಗಿ ನಕ್ಸಲೀಯರು ಕ್ಷೋಭೆ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನ ಗವೀಪುರಂನ ಸುರೇಶ್ವಾರಾನಂದ ಸ್ವಾಮೀಜಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಆರ್. ಪ್ರಸನ್ನಕುಮಾರ್, ಎಂ. ಶ್ರೀಕಾಂತ್, ಮುಖಂಡರಾದ ಶಿವಾಜಿರಾವ್ ಸಿಂಧೆ, ರಮೇಶ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.