ADVERTISEMENT

ಶ್ರೀರಂಗನ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಶ್ರೀರಂಗಪಟ್ಟಣ: ಮಕರ ಸಂಕ್ರಾಂತಿ ಅಂಗವಾಗಿ ಪಟ್ಟಣದ ಶ್ರೀರಂಗನಥಸ್ವಾಮಿ ದೇವಾಲಯ ಆವರಣದಲ್ಲಿ ಭಾನುವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಜನಮನ ಸೂರೆಗೊಂಡಿತು.

 ದೇವಾಲಯದ ಮುಂದೆ ಸಾಲು ಸಾಲಾಗಿ ಜೋಡಿಸಿದ್ದ ಮಣ್ಣಿನ ಹಣತೆಗಳು ಜಗಮಗಿಸಿದವು. ದೀಪಗಳ ಬೆಳಕಿನಲ್ಲಿ ಶ್ರೀರಂಗನಾಥ ದೇಗುಲಕ್ಕೆ ವಿಶೇಷ ಮೆರಗು ಬಂದಿತ್ತು. ದೇವಾಲಯದ ಮುಂದಿನ ಪ್ರಾಂಗಣದಲ್ಲಿ, ಸುಮಾರು 300 ಮೀಟರ್ ಉದ್ದದ ರಸ್ತೆಯ ಇಕ್ಕೆಲೆಗಳಲ್ಲಿ ದೀಪಗಳನ್ನು ಇಡಲಾಗಿತ್ತು. ಭಾನುವಾರ ಸಂಜೆ 4.15ಕ್ಕೆ ದೇವಾಲಯದಿಂದ ಜ್ಯೋತಿಯ ಮೆರವಣಿಗೆ ಹೊರಟಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಈ ಜ್ಯೋತಿ ಸಂಜೆ 6.30ಕ್ಕೆ ಸರಿಯಾಗಿ ದೇವಾಲಯ ತಲುಪಿತು. ದೇವಾಲಯದ ಮುಂದೆ ಹೋಮ, ಹವನ, ಪೂರ್ಣಾಹುತಿ ಕೈಂಕರ್ಯಗಳು ಪೂರ್ಣಗೊಂಡ ಬಳಿಕ ದೀಪಗಳನ್ನು ಹೊತ್ತಿಸುವ ಕಾರ್ಯ ಆರಂಭವಾಯಿತು.

  ಪಟ್ಟಣ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ಮೈಸೂರು, ಮಂಡ್ಯದಿಂದಲೂ ಭಕ್ತರು ದೀಪೋತ್ಸವಕ್ಕೆ ಆಗಮಿಸಿದ್ದರು. ಹಾಗೆ ಬಂದವರು ದೀಪಗಳನ್ನು ಹೊತ್ತಿಸಿ ಕೃತಾರ್ಥ ಭಾವ ತಾಳಿದರು. ಲಕ್ಷ ದೀಪೋತ್ಸವದ ಅಂಗವಾಗಿ ಶ್ರೀರಂಗನಾಥಸ್ವಾಮಿಯ ಮೂರ್ತಿಯನ್ನು ಬೆಣ್ಣೆಯಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಜನಸಂದಣಿ ಹೆಚ್ಚು ಇದ್ದುದರಿಂದ ನೂಕು ನುಗ್ಗಲು ಉಂಟಾಯಿತು. ದೀಪೋತ್ಸವಕ್ಕಾಗಿ ಒಂದು ಸಾವಿರ ಲೀಟರ್ ಎಣ್ಣೆ, ರಂಗನಾಥ ಸ್ವಾಮಿಯ ಬೆಣ್ಣೆ ಅಲಂಕಾರಕ್ಕೆ 70 ಕೆ.ಜಿ ಬೆಣ್ಣೆ ತರಿಸಲಾಗಿತ್ತು ಎಂದು ಲಕ್ಷ ದೀಪೋತ್ಸವ ಸಮಿತಿಯ ಉಮೇಶ್‌ಕುಮಾರ್ ತಿಳಿಸಿದರು. ಪಕ್ಕದ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಕೂಡ ದೀಪಗಳು ಬೆಳಗಿದವು. ವಿಪ್ರ ಮಹಿಳಾ ಮಂಡಳಿಯಿಂದ ಭಜನೆ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.