ADVERTISEMENT

ಸಂಕೇನಹಳ್ಳಿ: ಸರ್ವೆ ನಡೆಸಲು ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 16:50 IST
Last Updated 5 ಫೆಬ್ರುವರಿ 2011, 16:50 IST

ಹಾಸನ: ಅರಸೀಕೆರೆ ರಸ್ತೆಯ ಎಸ್. ಎಂ. ಕೃಷ್ಣ ನಗರದಲ್ಲಿ ಸರ್ವೆ ನಡೆಸಲು ಹೋದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಂಕೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅವರನ್ನು ಮರಳಿ ಕಳುಹಿಸಿದ ಘಟನೆ ಶನಿವಾರ ನಡೆದಿದೆ.

ವಸತಿ ನಿವೇಶನ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರದವರು ದಶಕದ ಹಿಂದೆ ಸ್ವಾಧೀನಕ್ಕೆ ತೆಗೆದುಕೊಂಡಿದ್ದ ಈ ಜಮೀನು ಹಲವು ವರ್ಷಗಳಿಂದ ವಿವಾದದಲ್ಲಿದೆ. ಸರ್ಕಾರಕ್ಕೆ ಜಮೀನನ್ನು ನೀಡಿದ್ದ ರೈತರೇ ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಜಾರಿಯಾಗದೆ ಉಳಿದುಕೊಂಡಿದೆ.

ಶನಿವಾರ ಮುಂಜಾನೆ ಜಮೀನು ಸರ್ವೆಗೆ ಅಧಿಕಾರಿಗಳು ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಸಂಕೇನ ಹಳ್ಳಿ ಗ್ರಾಮಸ್ಥರೆಲ್ಲ ಬಂದು ಸರ್ವೆ ನಡೆಸಕೂಡದು ಎಂದು ಅಧಿಕಾರಿಗಳನ್ನು ತಡೆದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದವೂ ನಡೆಯಿತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

‘ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಎಂಟು ವಾರಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಜ.31ರಂದು ಆದೇಶ ನೀಡಿದೆ. ಆದರೂ ಅಧಿಕಾರಿಗಳು ಇಲ್ಲಿ ಸರ್ವೆ ನಡೆಸಲು ಬಂದಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಅಲ್ಲೇ ಧರಣಿ ಕುಳಿತರು. ಕೊನೆಗೆ ವಿಧಿ ಇಲ್ಲದೇ ಅಧಿಕಾರಿಗಳು ಸರ್ವೆ ಕಾರ್ಯ ಕೈಬಿಟ್ಟು ಕಚೇರಿಗೆ ಮರಳಿದರು. ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.