ADVERTISEMENT

ಸಂಸದ-ಶಾಸಕರಿಗೆ ಕರವೇ ಸದಸ್ಯರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಲಿಂಗಸುಗೂರ: ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸಂವಿಧಾನದ ಕಲಂ 371ಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಹೈ.ಕ. ಹೋರಾಟ ಸಮಿತಿ ಮಂಗಳವಾರ ಕರೆ ನೀಡಿದ್ದ ಬಂದ್‌ಗೆ ಲಿಂಗಸುಗೂರಿನ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದವು. 

 ಪ್ರವಾಸಿ ಮಂದಿರದಲ್ಲಿದ್ದ ಸಂಸತ್ ಸದಸ್ಯ ಸಣ್ಣಫಕೀರಪ್ಪ, ಶಾಸಕ ಮಾನಪ್ಪ ವಜ್ಜಲ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು.

ಕರವೇ ಮುಖಂಡರೊಂದಿಗೆ ಚರ್ಚೆ ನಡೆಸಿದ ಸಣ್ಣಫಕೀರಪ್ಪ, ಹೈಕ ಪ್ರದೇಶ ವ್ಯಾಪ್ತಿಯ ಸಂಸದರ ನಿಯೋಗದಲ್ಲಿ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ನಿಲುವು ಸ್ಪಷ್ಟಪಡಿಸಿದ್ದಾಗಿ ವಿವರಿಸಿದರು. ಈ ಭಾಗದ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದಾರೆ. ಕನಸು ಸಾಕಾರಗೊಳ್ಳಲಿದೆ ಎಂದರು.

ನಿಯೋಗ ಸಾಕು ತಾವು ರಾಜೀನಾಮೆ ನೀಡುವ ಜೊತೆಗೆ ಹೋರಾಟಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರಿದರು. ಆಗ ಸಮಾಧಾನಪಡಿಸಿದ ಸಂಸದ ಮತ್ತು ಶಾಸಕರು ಅಗತ್ಯ ಬಿದ್ದರೆ ರಾಜೀನಾಮೆಗೂ ಸಿದ್ದ. ತಾವು ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಘೋಷಿಸಿದಾಗ ಜಯಕಾರ ಮೊಳಗಿತು.

ಕರವೇ ಮುಖಂಡರಾದ ಜಿಲಾನಿಪಾಷ, ಎಂ.ಎಂ. ಶಾಲಿ, ರಾಜೇಶ ಮಾಣಿಕ್, ಹನುಮೇಶ ನೆಲೊಗಿ, ಮಲ್ಲಿಕಾರ್ಜುನ ನಾಡಗೌಡ್ರ ಮತ್ತಿತರರು ಮುತ್ತಿಗೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.